ಪೌರ ಕಾರ್ಮಿಕರ ಸಮಸ್ಯೆ ಕುರಿತು ‘ರಾಮ ಆ್ಯಂಡ್ ರಾಮು’ ಸಿನಿಮಾ

ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿತ್ತು. ಆ ಘಟನೆಯಿಂದ ಪ್ರೇರಿತವಾಗಿ ನಿರ್ದೇಶಕ ಚಂದ್ರು ಓಬಯ್ಯ ಅವರು ‘ರಾಮ ಆ್ಯಂಡ್ ರಾಮು’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಮುಖ್ಯ ಪಾತ್ರದಲ್ಲಿ ಚಂದ್ರು ಓಬಯ್ಯ ಅವರೇ ನಟಿಸಿದ್ದಾರೆ.

ಪೌರ ಕಾರ್ಮಿಕರ ಸಮಸ್ಯೆ ಕುರಿತು ‘ರಾಮ ಆ್ಯಂಡ್ ರಾಮು’ ಸಿನಿಮಾ
Rama And Ramu Movie Team

Updated on: Sep 08, 2025 | 8:19 PM

ಚಂದ್ರು ಓಬಯ್ಯ ಅವರು ‘ಯೂ ಟರ್ನ್ 2’, ‘ಕರಿಮಣಿ ಮಾಲೀಕ’ ಸಿನಿಮಾಗಳಿಗೆ ನಿರ್ದೇಶಕ ಮಾಡಿದ್ದರು. ಈಗ ಅವರು ಸಾಮಾಜಿಕ ಕಳಕಳಿ ಇರುವ ‘ರಾಮ ಆ್ಯಂಡ್ ರಾಮು’ (Rama & Ramu) ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಅವರೇ ನಿರ್ದೇಶನ ಮತ್ತು ನಿರ್ಮಾಣ ಸಹ ಮಾಡಿದ್ದಾರೆ‌. ಅಷ್ಟೇ ಅಲ್ಲದೇ, ‘ರಾಮ ಆ್ಯಂಡ್ ರಾಮು’ ಸಿನಿಮಾದಲ್ಲಿ ಅವರು ಪೌರಕಾರ್ಮಿಕನ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪೌರ ಕಾರ್ಮಿಕರ (Pourakarmika) ಕುರಿತಾದ ಕಥೆ ಇದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು.

ಟೀಸರ್ ರಿಲೀಸ್ ಜೊತೆಗೆ ‘ರಾಮ ಆ್ಯಂಡ್ ರಾಮು’ ಸಿನಿಮಾ ತಂಡದವರು ಸುದ್ದಿಗೋಷ್ಠಿ ನಡೆಸಿದರು. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು. ಪೌರ ಕಾರ್ಮಿಕರು ಪ್ರತಿ ದಿನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಇಂಥ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾಗರಿಕರ ಪಾತ್ರದ ಬಗ್ಗೆ ಕೂಡ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಮಾಹಿತಿ ನೀಡಿದೆ ಚಿತ್ರತಂಡ.

ಸುದ್ದಿಗೋಷ್ಠಿಯಲ್ಲಿ ಚಂದ್ರು ಓಬಯ್ಯ ಮಾತನಾಡಿದರು. ‘ಈ ಸಿನಿಮಾವನ್ನು ವರ್ಷದ ಹಿಂದೆ ಪ್ರಾರಂಭಿಸಿದ್ದೆ. ಒಮ್ಮೆ ಫೇಸ್ ಬುಕ್​​ನಲ್ಲಿ ನೋಡಿದ ವಿಡಿಯೋ ಈ ಸಿನಿಮಾ ಆಗಲು ಪ್ರೇರಣೆ ಆಯಿತು. ನಮ್ಮ ಪರಿಸರ, ರಸ್ತೆಯನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕ ಮಹಿಳೆಯೊಬ್ಬರು ಮನೆಯ ಮುಂದೆ ನಿಂತು ನೀರು ಕೇಳಿದಾಗ ಆ ಮನೆಯವರು ನಡೆದುಕೊಂಡ ರೀತಿ ಕಂಡು ನನ್ನ ಮನಸಿಗೆ ತುಂಬಾ ಬೇಸರವಾಯಿತು’ ಎಂದು ಅವರು ಹೇಳಿದರು.

‘ಅದೇ ಘಟನೆ ಇಟ್ಟುಕೊಂಡು ಒಂದು ಕಾದಂಬರಿ ಬರೆದೆ. ನಂತರ ಅದನ್ನೇ ಈ ಸಿನಿಮಾ ಮಾಡಿದ್ದೇನೆ. ನಮ್ಮ ಪರಿಸರವನ್ನು ಸ್ವಚ್ಚ ಮಾಡುವವರನ್ನು ನಾವೇ ಗೌರವಿಸದಿದ್ದರೆ ಹೇಗೆ? ಒಂದು ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡಿದ್ದೇನೆ. ಹುಟ್ಟಿದಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಮೆಸೇಜ್ ಕೊಡಲು ಈ ಸಿನಿಮಾ ನಿರ್ಮಿಸಿದ್ದೇನೆ’ ಎಂದಿದ್ದಾರೆ ನಿರ್ದೇಶಕರು.

ಇದನ್ನೂ ಓದಿ:  ಹಿಮಾಲಯ ಪರ್ವತ ಹತ್ತಿದ ಮೈಸೂರಿನ ಪೌರ ಕಾರ್ಮಿಕರ ಮಕ್ಕಳು, ಮಾವುತರು: 24 ಜನರ ತಂಡದಿಂದ ಸಾಧನೆ

‘ರಾಮ ಆ್ಯಂಡ್ ರಾಮು’ ಸಿನಿಮಾ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿನಿಮಾದ ನಾಯಕಿ, ಬೆಳಗಾವಿ ಮೂಲದ ಸೌಮ್ಯ, ಪೊಲೀಸ್ ಪಾತ್ರ ಮಾಡಿದ ನಾಗೇಂದ್ರ ಅರಸ್, ಕಲಾವಿದರಾದ ಮೂಗು ಸುರೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಮುಂತಾದವರು ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 pm, Mon, 8 September 25