‘ನಂಗೆ ವೋಟ್ ಹಾಕ್ರಿ, ವಿಧಾನಸೌಧ ಮಾರಿ ನಿಮ್ಮ ಸಾಲ ತೀರಿಸ್ತೀನಿ’: ಆಶ್ವಾಸನೆ ಕೊಟ್ಟ ನಟ ರಿಷಿ
Ramana Avatara | Rishi: ಏಪ್ರಿಲ್ 10ರಂದು ‘ರಾಮನ ಅವತಾರ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಕುತೂಹಲ ಮೂಡಿಸಲು ರಿಷಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ದಿನಗಣನೆ ಆರಂಭ ಆಗಿದೆ. ಎಲ್ಲ ಪಕ್ಷಗಳೂ ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರಚಾರ ತಂತ್ರ. ಬಗೆಬಗೆಯ ಆಶ್ವಾಸನೆ ನೀಡುವ ಮೂಲಕ ಜನರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಂಥ ಸಮಯದಲ್ಲಿ ಕನ್ನಡದ ನಟ ರಿಷಿ ಅವರು ವಿಧಾನಸೌಧ (Vidhana Soudha) ಮಾರಿ, ಅದರಿಂದ ಬರುವ ಹಣದಲ್ಲಿ ಜನರ ಸಾಲ ತೀರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಾಗಂತ ಅವರು ಚುನಾವಣೆಗೆ ನಿಲ್ಲುತ್ತಾರಾ? ಖಂಡಿತಾ ಇಲ್ಲ. ಆದರೆ ಅವರು ಇಷ್ಟೆಲ್ಲ ಹೇಳಿರುವುದು ‘ರಾಮನ ಅವತಾರ’ (Ramana Avatara) ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಷ್ಟೇ. ಸೋಶಿಯಲ್ ಮೀಡಿಯಾದಲ್ಲಿ ರಿಷಿ ಹಂಚಿಕೊಂಡಿರುವ ವಿಡಿಯೋ ಸಖತ್ ಇಂಟರೆಸ್ಟಿಂಗ್ ಆಗಿದೆ.
ಜಂಟಲ್ಮ್ಯಾನ್ ರಾಮ ಹೇಳಿದ್ದೇನು?
‘ನಮ್ಮ ರಾಜ್ಯದ ಎಲ್ಲ ಸಮಸ್ಯೆಯನ್ನು ಬಗೆಹರಿಸಬೇಕು ಎಂದರೆ ಮೊದಲು ನಾವು ವಿಧಾನಸೌಧ ಮಾರಬೇಕು. ಓಹ್.. ನಾನು ಯಾರು ಅಂತ ಕೇಳ್ತಾ ಇದ್ದೀರಾ? ನನ್ನ ಹೆಸರು ರಾಮಕೃಷ್ಣ. ಊರಲ್ಲಿ ಎಲ್ಲರೂ ನನ್ನ ಜಂಟಲ್ಮ್ಯಾನ್ ರಾಮ ಅಂತ ಕರೀತಾರೆ. ಚಾಟ್ ಜಿಪಿಟಿ ಬಂದಮೇಲೆ ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ರು. ಎಲ್ಲೇ ಕೆಲಸ ಹುಡುಕಿಕೊಂಡು ಹೋದ್ರು ಏನ್ ಓದಿದೀಯಾ ಅಂತ ಕೇಳ್ತಾರೆ. ಯಾರೂ ಈ ಪ್ರಶ್ನೆ ಕೇಳಬಾರದು. ಅಂತಹ ಕೆಲಸ ಮಾಡ್ತೀನಿ. ಎಲೆಕ್ಷನ್ಗೆ ನಿಲ್ಲುತ್ತೇನೆ’ ಎಂದಿದ್ದಾರೆ ಜಂಟಲ್ಮ್ಯಾನ್ ರಾಮನ ಪಾತ್ರ ಮಾಡಿರುವ ರಿಷಿ.
ಇದನ್ನೂ ಓದಿ: Kichcha Sudeep: ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಸುದೀಪ್? ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ದೊಡ್ಡ ಸುದ್ದಿ
ರಾಜಕಾರಣಿಗಳಿಗೆ ಅಷ್ಟು ದೊಡ್ಡ ಆಫೀಸ್ ಯಾಕೆ ಬೇಕು?
‘ನಾನೇನಾದರೂ ಅಧಿಕಾರಕ್ಕೆ ಬಂದರೆ ವಿಧಾನಸೌಧ ಮಾರುತ್ತೇನೆ. ಎಲ್ಲರಿಗೂ ವರ್ಕ್ ಫ್ರಮ್ ಹೋಮ್ ಇದೆ. ನಮ್ಮಂಥ ರಾಜಕಾರಣಿಗಳಿಗೆ ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಆಫೀಸ್ ಯಾಕೆ ಬೇಕು? ವಿಧಾನಸೌಧ ಮಾರಿ, ಅದರಿಂದ ಬಂದ ದುಡ್ಡಲ್ಲಿ ನಮ್ಮೆಲ್ಲರ ಸಾಲ ತೀರಿಸುತ್ತೇನೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಉಚಿತವಾಗಿ ಮಾಡಿಸುತ್ತೇನೆ. ನನ್ನಂಥ ಹೊಸ ನಾಯಕ ಬೇಕು ಅಂದರೆ ನನಗೆ ನೀವು ವೋಟ್ ಹಾಕಬೇಕು’ ಎಂದು ರಿಷಿ ಈ ವಿಡಿಯೋದಲ್ಲಿ ಹೇಳಿದ್ದಾರೆ.
View this post on Instagram
ಅಷ್ಟಕ್ಕೂ ರಿಷಿ ಇದನ್ನೆಲ್ಲ ಹೇಳಿದ್ದು ಯಾಕೆ? ಈ ಜಂಟಲ್ಮ್ಯಾನ್ ರಾಮ ಯಾರು? ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ‘ರಾಮನ ಅವತಾರ’ ಸಿನಿಮಾದ ಟ್ರೇಲರ್ ನೋಡಬೇಕು. ಏಪ್ರಿಲ್ 10ರಂದು ಟ್ರೇಲರ್ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಕುತೂಹಲ ಮೂಡಿಸಲು ರಿಷಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.