
ಸಿನಿಮಾ (Cinema) ತಾರೆಯರು ಬೇರೆ ಬೇರೆ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಹೋಗುವುದು ಸಾಮಾನ್ಯ. ಅದರಲ್ಲೂ ವಿದೇಶಗಳಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಗೆ ಸಿನಿಮಾ ನಟ-ನಟಿಯರಿಗೆ ಹೆಚ್ಚಿನ ಆಹ್ವಾನಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ಅಮೆರಿಕದಲ್ಲಿ ನಾವಿಕ ಕನ್ನಡ ಸಮ್ಮೇಳನ ನಡೆದಿತ್ತು. ಕಾರ್ಯಕ್ರಮದಲ್ಲಿ ಕೆಲವು ಕನ್ನಡದ ನಟ-ನಟಿಯರು ಅತಿಥಿಗಳಾಗಿ ಭಾಗವಹಿಸಿದ್ದರು. ಆದರೆ ವಿಶೇಷ ಎನಿಸಿದ್ದು, ರಮ್ಯಾ ಮತ್ತು ರಕ್ಷಿತ್ ಶೆಟ್ಟಿ ಅವರು ಸಹ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಬಳಿಕ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ನಡುವೆ ವಿವಾದ ಭುಗಿಲೆದ್ದಿದೆ. ಪರಸ್ಪರರು ಕಾನೂನು ಹೋರಾಟ ನಡೆಸುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಈ ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಇಬ್ಬರೂ ಒಟ್ಟಿಗೆ ನಗು-ನಗುತ್ತಾ ಜೊತೆಯಾಗಿ ಫೋಟೊ ಸಹ ಕ್ಲಿಕ್ಕಿಸಿಕೊಂಡಿದ್ದಾರೆ.
ರಮ್ಯಾ ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಟ್ರೈಲರ್ ನೋಡಿ ಖುಷಿಯಾದ ರಕ್ಷಿತ್ ಶೆಟ್ಟಿ ಆ ಸಿನಿಮಾ ಅನ್ನು ಪ್ರೆಸೆಂಟ್ ಮಾಡಿದ್ದರು. ಸಿನಿಮಾದ ವಿತರಣೆಯನ್ನೂ ಮಾಡಿ, ಸಿನಿಮಾದ ಪ್ರಚಾರ ಇನ್ನಿತರೆಗಳ ಮೇಲೆ ಬಂಡವಾಳ ಹೂಡಿದ್ದರು. ಸಿನಿಮಾ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಆದರೆ ರಮ್ಯಾ ಅವರು ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿದರು.
ಇದನ್ನೂ ಓದಿ:ಎಷ್ಟೇ ವರ್ಷ ಕಳೆದರೂ ನೀವೇ ನಮ್ಮ ಕ್ರಶ್: ರಮ್ಯಾ ಫೋಟೋಗೆ ಹೊಗಳಿಕೆ
ಸಿನಿಮಾ ಬಿಡುಗಡೆ ಆಗುವ ಮುಂಚೆ, ರಮ್ಯಾ, ತಮ್ಮ ದೃಶ್ಯಗಳನ್ನು ಬಳಸದಂತೆ ಚಿತ್ರತಂಡದ ಬಳಿ ವಿನಂತಿ ಮಾಡಿದ್ದರು. ಆದರೆ ಚಿತ್ರತಂಡದವರು ರಮ್ಯಾರ ಮನವಿಗೆ ವಿರುದ್ಧವಾಗಿ ನಿಲವು ತಳೆದರು. ರಮ್ಯಾ, ಆ ಸಿನಿಮಾ ಬಿಡುಗಡೆ ಮಾಡದಂತೆ ತಡೆಯಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ಆದರೆ ನ್ಯಾಯಾಲಯದ ಆದೇಶ ಚಿತ್ರತಂಡದ ಪರ ಆಗಿ ಸಿನಿಮಾ ಬಿಡುಗಡೆ ಆಯ್ತು, ಅಂತೆಯೇ ಸಿನಿಮಾದಲ್ಲಿ ನಟಿಸಿದ ಯುವಕರು ಚಿತ್ರಮಂದಿರದ ಮುಂದೆ ‘ನನ್ನ ನೀನು ಗೆಲ್ಲಲಾರೆ’ ಹಾಡು ಹಾಡಿ ರಮ್ಯಾರ ಕಾಲೆಳೆದರು.
ಆದರೆ ಪಟ್ಟು ಬಿಡದ ರಮ್ಯಾ ಪ್ರಕರಣವನ್ನು ದಾಖಲಿಸಿದ್ದು, ಸಮಯಕ್ಕೆ ಸರಿಯಾಗಿ ವಿಚಾರಣೆಗೆ ಹಾಜರಾಗುತ್ತಾ ನ್ಯಾಯಾಲಯಕ್ಕೆ ಹಾಜರಾಗುತ್ತಾ, ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡುತ್ತಾ ವಿಚಾರಣೆ ಜಾರಿಯಲ್ಲಿಟ್ಟಿದ್ದಾರೆ. ರಮ್ಯಾ ಅವರು ಸಿನಿಮಾದ ವಿತರಣೆ ಮಾಡಿದ್ದ ಹಾಗೂ ಪ್ರೆಸೆಂಟ್ ಮಾಡಿದ್ದ ರಕ್ಷಿತ್ ಅವರ ‘ಪರಮವಃ ಸ್ಟುಡಿಯೋಸ್’ ಮೇಲೆಯೂ ದೂರು ದಾಖಲಿಸಿದ್ದಾರೆ.
ಇಬ್ಬರ ನಡುವೆ ಕಾನೂನು ಹೋರಾಟ ಇದ್ದರೂ ಸಹ ಇದೀಗ ದೂರ ದೇಶದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವುದು ಆಶ್ಚರ್ಯ ಮೂಡಿಸಿದೆ. ಇಬ್ಬರೂ ಭೇಟಿ ಆಗಿದ್ದಾರೆಯೇ ವಿನಃ ವಿವಾದ ಅಂತ್ಯ ಮಾಡಿಕೊಂಡಿಲ್ಲ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ