
ಖ್ಯಾತ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರಿಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮತ್ತು ಮೆಸೇಜ್ ಮಾಡಿದ್ದರು. ದರ್ಶನ್ ಕೇಸ್ ಬಗ್ಗೆ ರಮ್ಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಡಿ ಬಾಸ್ ಅಭಿಮಾನಿಗಳು (Darshan Fans) ಕೋಪಗೊಂಡು ಈ ರೀತಿ ಮೆಸೇಜ್ ಕಳಿಸಿದ್ದರು. ಅಂಥವರ ವಿರುದ್ಧ ರಮ್ಯಾ ಅವರು ಕೇಸ್ ಹಾಕಿ, ಕಾನೂನಿನ ಮೂಲಕ ಪಾಠ ಕಲಿಸುತ್ತಿದ್ದಾರೆ. ಈಗಾಗಲೇ ಕಿಡಿಗೇಡಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಳಿಕ ಜಾಮೀನು ಕೂಡ ಸಿಕ್ಕಿದೆ. ‘ಕಾಲಿಗೆ ಬೀಳ್ತೀವಿ, ದಯವಿಟ್ಟು ಕೇಸ್ ವಾಪಸ್ ತೆಗೆದುಕೊಳ್ಳಿ’ ಎಂದು ಆರೋಪಿಗಳ ಕುಟುಂಬದವರು ರಮ್ಯಾಗೆ ಮನವಿ ಮಾಡಿದ್ದಾರೆ. ಅದಕ್ಕೆ ರಮ್ಯಾ (Ramya) ಅವರು ಖಡಕ್ ಉತ್ತರ ನೀಡಿದ್ದಾರೆ.
‘ಎಲ್ಲ ಆರೋಪಿಗಳು ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ನಾನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಅವರು ಈ ರೀತಿ ತಪ್ಪು ಮತ್ತೊಮ್ಮೆ ಯಾರಿಗೂ ಮಾಡಬಾರದು ಎಂಬುದು ನನ್ನ ಉದ್ದೇಶ. ಅದಕ್ಕಾಗಿಯೇ ನಾನು ದೂರು ದಾಖಲಿಸಿದ್ದು. ಅವರು ಮತ್ತೆ ತಪ್ಪು ಮಾಡಲ್ಲ ಎಂಬ ಭರವಸೆ ನನಗೆ ಇದೆ. ಶಿಕ್ಷೆ ಕೊಡಿಸಬೇಕು ಎಂಬ ಉದ್ದೇಶ ನನಗೆ ಇಲ್ಲ’ ಎಂದು ರಮ್ಯಾ ಅವರು ಹೇಳಿದ್ದಾರೆ.
‘ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬೇಕು ಎಂದರೆ, ಹೆಣ್ಮಕ್ಕಳ ಸಲುವಾಗಿ ನಾವು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಆ ಪ್ರಕಾರವಾಗಿ ಅರೆಸ್ಟ್ ಮಾಡಲಾಗಿತ್ತು. ಕಾನೂನಿನ ಪ್ರಕಾರವೇ ಅವರೆಲ್ಲ ಈಗ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರ ಪೋಷಕರು ಬಂದು ನನ್ನನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಕೇಳುವ ಬದಲು ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ’ ಎಂದಿದ್ದಾರೆ ರಮ್ಯಾ.
‘ಒಂದು ಕಡೆ ನೀವು ಬಡವರು ಎನ್ನುತ್ತೀರಿ. ಫೋನ್ ಇದೆ ಅಂತ ನೀವು ಡೇಟಾ ಖರೀದಿಸಬಹುದು, ಇನ್ಸ್ಟಾಗ್ರಾಮ್ ಬಳಸಬಹುದು, ಕಮೆಂಟ್ ಮಾಡಬಹುದು. ಹಾಗೆಲ್ಲ ಕಮೆಂಟ್ ಮಾಡುವುದು ಸರಿಯಲ್ಲ ಅಂತ ಮಕ್ಕಳಿಗೆ ಹೇಳಿಕೊಡಬೇಕು. ಯಾರೋ ಸ್ನೇಹಿತರು ಕಮೆಂಟ್ ಮಾಡಿದರು ಎನ್ನುವುದಾದರೆ ಇನ್ಮೇಲೆ ನಿಮ್ಮ ಮೊಬೈಲ್ ಯಾರಿಗೂ ಕೊಡಬೇಡಿ’ ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಕ್ಕೆ ಶುಭ ಕೋರಿದ ನಟಿ ರಮ್ಯಾ
ಸಿನಿಮಾಗೆ ಕಮ್ಬ್ಯಾಕ್ ಮಾಡುವ ಬಗ್ಗೆಯೂ ರಮ್ಯಾ ಅವರು ಆಲೋಚನೆ ಮಾಡಿದ್ದಾರೆ. ಈಗಾಗಲೇ ಅವರು ಕೆಲವು ಕಥೆಗಳನ್ನು ಕೇಳಿದ್ದಾರೆ. ಐತಿಹಾಸಿಕ, ಪೌರಾಣಿಕ ಶೈಲಿಯ ಸಿನಿಮಾಗಳನ್ನು ಮಾಡುವ ಆಸೆ ಅವರಿಗೆ ಇದೆ. ಈಗಾಗಲೇ ಚಿತ್ರರಂಗದ ಹಿಟ್ ನಿರ್ದೇಶಕರೊಬ್ಬರ ಜೊತೆ ರಮ್ಯಾ ಅವರು ಹೊಸ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಆ ನಿರ್ದೇಶಕ ಯಾರು ಎಂಬುದನ್ನು ರಮ್ಯಾ ಬಹಿರಂಗಪಡಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.