‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಟಿಸಲಿಲ್ಲವೇಕೆ? ರಮ್ಯಾ ಕೊಟ್ಟರು ಕಾರಣ

|

Updated on: Nov 14, 2023 | 3:02 PM

Ramya: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ನಟಿ ರಮ್ಯಾ ನಿರ್ಮಾಣ ಮಾಡಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಬೇಕಿತ್ತು, ಆದರೆ ಅಚಾನಕ್ಕಾಗಿ ಪಾತ್ರದಿಂದ ಹಿಂದೆ ಸರಿದರು. ಅದಕ್ಕೆ ಕಾರಣವನ್ನು ಈಗ ನೀಡಿದ್ದಾರೆ ರಮ್ಯಾ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಟಿಸಲಿಲ್ಲವೇಕೆ? ರಮ್ಯಾ ಕೊಟ್ಟರು ಕಾರಣ
ರಮ್ಯಾ
Follow us on

ನಟಿ ರಮ್ಯಾ (Ramya) ಕನ್ನಡ ಚಿತ್ರರಂಗದಲ್ಲಿ ರಾಣಿಯಂತೆ ಮೆರೆದು ‘ಸ್ಯಾಂಡಲ್​ವುಡ್ ಕ್ವೀನ್’ ಎಂದು ಹೆಸರುಗಳಸಿದ್ದರು. ಆದರೆ ರಾಜಕೀಯದ ಸಾಂಗತ್ಯ ಬೆಳೆಸಿ ಸಿನಿಮಾಗಳಿಂದ ಕೆಲ ವರ್ಷ ದೂರಾದರು ಇದೀಗ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ನಟಿ ಹಾಗೂ ನಿರ್ಮಾಪಕಿ ಎರಡೂ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಮ್ಯಾ ತಮ್ಮ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi mutthina male haniye) ಸಿನಿಮಾ ಘೋಷಿಸಿ, ತಾವೇ ಅದರಲ್ಲಿ ನಾಯಕಿಯಾಗಿಯೂ ನಟಿಸಲಿರುವುದಾಗಿ ಹೇಳಿದ್ದರು. ಆದರೆ ಅಚಾನಕ್ಕಾಗಿ ನಾಯಕಿ ಪಾತ್ರದಿಂದ ಹಿಂದೆ ಸರಿದರು. ಆದರೆ ಆ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ರಮ್ಯಾ ತಿಳಿಸಿರಲಿಲ್ಲ. ಈಗ ಆ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಬರೆದು, ನಿರ್ದೇಶಿಸಿ ನಾಯಕನ ಪಾತ್ರದಲ್ಲಿಯೂ ನಟಿಸಿದ್ದಾರೆ. ರಮ್ಯಾ ಹೇಳಿರುವಂತೆ ರಾಜ್ ಬಿ ಶೆಟ್ಟರು ಮೊದಲು ರಮ್ಯಾಗೆ ಕತೆ ಹೇಳಿದಾಗ ಬಹಳ ಭಾವುಕರಾದರಂತೆ. ಕತೆಯಲ್ಲಿನ ಡೀಟೇಲಿಂಗ್ ಬಹಳ ಹಿಡಿಸಿತಂತೆ. ಹಾಗಾಗಿ ನಾಯಕಿ ಪಾತ್ರದಲ್ಲಿ ತಾವೇ ನಟಿಸುವ ಮನಸ್ಸು ಮಾಡಿದರಂತೆ ರಮ್ಯಾ. ಆದರೆ ಸಿನಿಮಾ ಪ್ರಾರಂಭವಾಗುವ ಸಮಯದಲ್ಲಿ ಆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುವುದು ಎಂದಾಯ್ತಂತೆ. ಒಂದು ಒಟಿಟಿಯವರು ಸಿನಿಮಾ ತೆಗೆದುಕೊಳ್ಳುವುದಾಗಿ ಆಗಲೇ ಭರವಸೆ ನೀಡಿದ್ದರು.

ಆದರೆ ರಮ್ಯಾಗೆ ತಮ್ಮ ಕಮ್​ಬ್ಯಾಕ್ ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಬೇಕು ಎಂಬ ಆಸೆಯಿತ್ತಂತೆ. ಹಾಗಾಗಿ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರಗುಳಿದರು. ಆದರೆ ಯಾವ ಒಟಿಟಿ ಸಿನಿಮಾ ಖರೀದಿಸುವುದಾಗಿ ಹೇಳಿತ್ತೋ ಆ ಸಂಸ್ಥೆ ಕೊನೆಯ ಸಮಯದಲ್ಲಿ ಕೈಕೊಟ್ಟಿತಂತೆ. ‘ಕನ್ನಡ ಚಿತ್ರಗಳಿಗೆ ಈ ರೀತಿ ಮಾಡುವುದು ಸಾಮಾನ್ಯ ಆಗಿಹೋಗಿದೆ’ ಎಂದು ಬರೆದುಕೊಂಡಿರುವ ರಮ್ಯಾ, ‘ನಿಮ್ಮನ್ನು ಸೇರಿಕೊಳ್ಳಲು ಹಲವು ದಾರಿಗಳನ್ನು ಹುಡುಕುತ್ತೇವೆ’ ಎಂದು ಸಹ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕೊನೆಗೂ ರಿವೀಲ್ ಆಯ್ತು ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್​​ ದಿನಾಂಕ

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಇದೇ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ, ಪ್ರೀತಿಯ ಸ್ವಾದವನ್ನು ಸವಿಯಿರಿ. ಎಲ್ಲರಿಗೂ ದೀಪಾವಳಿ ಶುಭಾಶಯಗಳು’ ಎಂದಿರುವ ನಟಿ ರಮ್ಯಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ನನಗೆ ಬಹಳ ವಿಶೇಷವಾದ ಸಿನಿಮಾ. ನಿರ್ಮಾಪಕಿಯಾಗಿ ಇದು ನನ್ನ ಮೊದಲ ಸಿನಿಮಾ ಮಾತ್ರವೇ ಅಲ್ಲ , ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ಸಿನಿಮಾ” ಎಂದಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಮ್ಯಾ ನಿರ್ವಹಿಸಬೇಕಿದ್ದ ನಾಯಕಿಯ ಪಾತ್ರವನ್ನು ಸಿರಿ ರವಿಕುಮಾರ್ ನಿರ್ವಹಿಸಿದ್ದಾರೆ. ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಸಹೃದಯರ ಮನ ಗೆದ್ದಿದೆ. ಸುಂದರವಾದ ಲೊಕೇಶನ್​ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸಿನಿಮಾಕ್ಕೆ ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಕ್ಯಾಮೆರಾ ಕೆಲಸ ಪ್ರವೀಣ್ ಶ್ರಿಯಾನ್ ಅವರದ್ದಾಗಿದೆ. ಸಿನಿಮಾ ಇದೇ ನವೆಂಬರ್ 24ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ