ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ದಕ್ಷಿಣ ಭಾರತದಲ್ಲಿ ಮಾಸ್ ಮಸಾಲಾ, ಐಟಂ ಸಾಂಗ್ಗಳು ಇರುತ್ತವೆ. ಆದರೆ ರೊಮ್ಯಾಂಟಿಕ್ ಸಾಂಗ್ ವಿಚಾರದಲ್ಲಿ ಬಾಲಿವುಡ್ (Bollywood) ಬೆಸ್ಟ್. ಬಾಲಿವುಡ್ನಲ್ಲಿ ನನ್ನ ಮೊದಲ ರೊಮ್ಯಾಂಟಿಕ್ ಹಾಡು ಬರುತ್ತಿದೆ’ ಎಂದು ಹೇಳಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು. ಈ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಅವರು ಪದೇಪದೇ ಟ್ರೋಲ್ಗೆ ಒಳಗಾಗುತ್ತಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.
‘ಪ್ರೇಮಾ ದಿ ಜರ್ನಲಿಸ್ಟ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ಮಾತನಾಡಿದ್ದಾರೆ. ಈ ವೇಳೆ ಅವರಿಗೆ ಈ ಹಾಡಿನ ವಿಚಾರಕ್ಕೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ‘ಅಂದು ನನ್ನ ಮಾತನ್ನು ಅರ್ಧಕ್ಕೆ ತಡೆಯಲಾಯಿತು. ಇನ್ನೂ ನಾನು ಮಾತನಾಡುವುದು ಇತ್ತು. ನನ್ನ ಅನೇಕ ರೊಮ್ಯಾಂಟಿಕ್ ಹಾಡುಗಳು ದಕ್ಷಿಣದಲ್ಲಿ ಹಿಟ್ ಆಗಿವೆ. ಹೇಗಂದರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಮಾತು ಮುಂದುವರಿಸಿಲ್ಲ. ಆದರೆ, ನಂತರ ಟ್ರೋಲ್ ಮಾಡಿದರು’ ಎಂದಿದ್ದಾರೆ.
ಯಾವಾಗಲೂ ರಶ್ಮಿಕಾ ಟ್ರೋಲ್ ಆಗೋದೇಕೆ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನಾನು ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ತಿರುಗೇಟು ನೀಡಿಲ್ಲ. ನಾನು ಜನರಿಗೆ ನೀಡುವ ಗೌರವ ಇದು. ನಾನು ಎಲ್ಲವನ್ನೂ ಸ್ವೀಕರಿಸುತ್ತೇನೆ. ನಾನು ಆರಂಭದಲ್ಲೇ ಆ ತಪ್ಪು ಮಾಡಿದೆ. ಆದರೆ, ಈಗ ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಏಕೆಂದರೆ, ನನ್ನ ಕುಟುಂಬದ ಮೇಲೆ ಇದು ಪ್ರಭಾವ ಬೀರುತ್ತಿದೆ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ‘ಎಸೆದ ಕಲ್ಲುಗಳಿಂದ ರಕ್ತ ಬಂದರೆ ಅದನ್ನು ಒಪ್ಪೋಕಾಗಲ್ಲ’; ಸುದೀಪ್ ಹೇಳಿಕೆಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಜನವರಿ 20ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಅವರು ಅಂಧ ಪಾಕ್ ಯುವತಿಯ ಪಾತ್ರ ಮಾಡಿದ್ದಾರೆ.