ಕರ್ನಾಟಕ ಕಂಡ ಧಕ್ಷ ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್ ಕೂಡ ಒಬ್ಬರು. ಅವರು ಮಾಡಿದ ಕೆಲಸಗಳಿಗೆ ಜನರು ಫಿದಾ ಆಗಿದ್ದಾರೆ. ಅವರ ಭಾಷಣಗಳನ್ನು ಕೇಳಿ ಅಪಾರ ಸಂಖ್ಯೆಯ ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅನೇಕರಿಗೆ ರವಿ ಡಿ. ಚನ್ನಣ್ಣನವರ್ ಮಾದರಿ ವ್ಯಕ್ತಿ. ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಎಷ್ಟೋ ಯುವಕರಿಗೆ ಅವರೇ ಪ್ರೇರಣೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿರುವ ರವಿ ಡಿ. ಚನ್ನಣ್ಣನವರ್ ಒಂದು ಕಾಲದಲ್ಲಿ ಸಿನಿಮಾದ ಬ್ಲಾಕ್ ಟಿಕೆಟ್ ಮಾರುತ್ತಿದ್ದರು ಎಂಬುದು ಅಚ್ಚರಿಯ ವಿಚಾರ. ಈ ಬಗ್ಗೆ ಸ್ವತಃ ರವಿ ಚನ್ನಣ್ಣನವರ್ ಹೇಳಿಕೊಂಡಿದ್ದಾರೆ!
ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ಕಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಲಿರುವ ‘ದಿಲ್ ಪಸಂದ್’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಸೆ.27) ನಡೆಯಿತು. ಅದಕ್ಕೆ ಮುಖ್ಯ ಅತಿಥಿಯಾಗಿ ರವಿ ಡಿ. ಚನ್ನಣ್ಣನವರ್ ಆಗಮಿಸಿದ್ದರು. ಅವರ 13 ವರ್ಷಗಳ ಸರ್ವೀಸ್ನಲ್ಲಿ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದು ಇದೇ ಮೊದಲು. ಆ ವೇದಿಕೆಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಯಾರಿಗೂ ಗೊತ್ತಿಲ್ಲದ ಬ್ಲಾಕ್ ಟಿಕೆಟ್ ಕಹಾನಿಯನ್ನೂ ಅವರು ತೆರೆದಿಟ್ಟರು.
ರವಿ ಡಿ. ಚನ್ನಣ್ಣನವರ್ ಅವರಿಗೆ ನಟನೆ, ಬರವಣಿಗೆ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇದೆ. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಲೇಜು ದಿನಗಳಿಂದಲೂ ಅವರ ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರಿವೆ. ಡಾ. ರಾಜ್ಕುಮಾರ್ ಅವರ ‘ಮಯೂರ’ ಸಿನಿಮಾ ನೋಡಿ ಅವರು ಸ್ವಾಭಿಮಾನದ ಪಾಠ ಕಲಿತರು. ಈ ಎಲ್ಲ ಘಟನೆಗಳನ್ನು ಅವರು ಮೆಲುಕು ಹಾಕಿದರು.
‘ಎಲ್ಲೂ ಹೇಳಲಾರದ ಒಂದು ಸತ್ಯವನ್ನು ನಾನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ. ‘ಅಸುರ’ ಸಿನಿಮಾ ರಿಲೀಸ್ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ’ ಎಂದು ಅವರು ಹೇಳಿದರು.
ಮೊದಲಿನಿಂದಲೂ ನಾಟಕಗಳ ಜೊತೆ ನಂಟು ಹೊಂದಿರುವ ರವಿ ಡಿ. ಚನ್ನಣ್ಣನವರ್ ಇತ್ತೀಚೆಗೆ ಬರಹಗಳನ್ನು ಕೂಡ ಆರಂಭಿಸಿದ್ದಾರೆ. ಅನೇಕ ಕಥೆಗಳನ್ನು ಅವರು ಬರೆದಿದ್ದಾರೆ. ಅವು ಇನ್ನೂ ಪ್ರಕಟಗೊಂಡಿಲ್ಲ. ‘ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ’ ಎನ್ನುವ ಮೂಲಕ ಈ ಮಾಧ್ಯಮದ ಪ್ರಭಾವವನ್ನು ಅವರು ಶ್ಲಾಘಿಸಿದರು.
‘ದಿಲ್ ಪಸಂದ್’ ಚಿತ್ರಕ್ಕೆ ಸುಮಂತ್ ಕ್ರಾಂತಿ ಬಂಡವಾಳ ಹೂಡುತ್ತಿದ್ದಾರೆ. ಶಿವ ತೇಜಸ್ ನಿರ್ದೇಶನ ಮಾಡುತ್ತಿದ್ದಾರೆ. ತಬಲ ನಾಣಿ, ಸಾಧುಕೋಕಿಲ ಮುಂತಾದ ಖ್ಯಾತ ನಟರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇದರ ಶೂಟಿಂಗ್ ಆರಂಭ ಆಗಲಿದೆ.
ಇದನ್ನೂ ಓದಿ:
ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್
ಅನಗತ್ಯ ಓಡಾಡುವವರಿಗೆ ಬ್ರೇಕ್ ಹಾಕಲು ಫೀಲ್ಡಿಗಿಳಿದ ಎಸ್ಪಿ ರವಿ ಚನ್ನಣ್ಣನವರ್
Published On - 8:15 am, Tue, 28 September 21