
ಉಪೇಂದ್ರ ಅವರು ನಟನೆಯ ಜೊತೆಗೆ ನಿರ್ದೇಶನದಲ್ಲೂ ಬ್ಯುಸಿ ಇದ್ದಾರೆ. ‘ಯುಐ’ ಸಿನಿಮಾ ಬಳಿಕ ಅವರು ನಿರ್ದೇಶನದ ಬಗ್ಗೆ ಅಷ್ಟಾಗಿ ಗಮನ ಹರಿಸಿರಲಿಲ್ಲ. ಅವರು ಕೇವಲ ನಟನೆಯಲ್ಲಿ ಬ್ಯುಸಿ ಇದ್ದರು. ‘ನಿರ್ದೇಶನ ಯಾವಾಗ’ ಎಂದು ಪ್ರಶ್ನೆ ಮಾಡುತ್ತಾ ಇರುವವರಿಗೆ ಉತ್ತರ ಸಿಕ್ಕಿದೆ. ಉಪ್ಪಿ ಅವರು ಹೊಸ ಕಥೆ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಅಭಿಮಾನಿಗಳಲ್ಲಿ ಈ ಸುದ್ದಿ ಭಾರೀ ಕುತೂಹಲ ಮೂಡಿಸಿದೆ.
ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ಮುಂದಿನ ನಿರ್ದೇಶನದ ಬಗ್ಗೆ ಉಪೇಂದ್ರ ಮುಕ್ತವಾಗಿ ಮಾತನಾಡಿದ್ದಾರೆ. ‘ಸದ್ಯ ನಾನು ಹೊಸ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದೇನೆ. ಸದ್ಯ ಕೈಯಲ್ಲಿರುವ ಎರಡು ಸಿನಿಮಾಗಳ ಶೂಟಿಂಗ್ ಮುಗಿಯಬೇಕಿದೆ. ಆ ಬಳಿಕ ನನ್ನ ನಿರ್ದೇಶನದ ಕೆಲಸ ಶುರುವಾಗಲಿದೆ. ಸಿನಿಮಾ ಘೋಷಣೆ ಮಾಡಿದ ತಕ್ಷಣ ಕಥೆಯ ಸುಳಿವು ನಿಮಗೆ ಸಿಗಲಿದೆ’ ಎಂದು ಉಪ್ಪಿ ಹೇಳಿದ್ದಾರೆ. ಇದನ್ನು ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇದೇ ವೇಳೆ ಪುತ್ರ ಆಯುಷ್ ಸಿನಿಮಾ ಎಂಟ್ರಿ ಬಗ್ಗೆಯೂ ಉಪ್ಪಿ ಮಾಹಿತಿ ಹಂಚಿಕೊಂಡಿದ್ದಾರೆ. ಮಗನ ಮೊದಲ ಸಿನಿಮಾದ ಕಥೆಯ ಚರ್ಚೆಯಲ್ಲಿ ಉಪ್ಪಿ ಕೂಡ ಭಾಗಿ ಆಗಿದ್ದರು. ವಿಶೇಷ ಎಂದರೆ ಈ ಚಿತ್ರಕ್ಕೆ ಪತ್ನಿ ಪ್ರಿಯಾಂಕಾ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕಾ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ.
ಸದ್ಯ ಉಪೇಂದ್ರ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಶೂಟಿಂಗ್‌ಗಾಗಿ ಚಿಕ್ಕಮಗಳೂರಿನಿಂದ ಕೊಡೈಕೆನಾಲ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇದು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಚಿತ್ರವಾಗಿದೆ. ಹುಲಿವೇಷ ಕಲೆಯ ಹಿನ್ನೆಲೆಯ ಕಥೆ ಇದರಲ್ಲಿದೆ. ಈ ಚಿತ್ರದಲ್ಲಿ ಪ್ರಭುದೇವ ಹಾಗೂ ಅಥರ್ವ ಕೂಡ ನಟಿಸುತ್ತಿದ್ದಾರೆ. 24 ವರ್ಷಗಳ ಬಳಿಕ ಉಪ್ಪಿ ಮತ್ತು ಪ್ರಭುದೇವ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಕನ್ನಡದಲ್ಲೂ ಉಪೇಂದ್ರ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಒಪ್ಪಿಕೊಂಡಿದ್ದಾರೆ. ಅರವಿಂದ್ ಕೌಶಿಕ್ ಈ ಆ್ಯಕ್ಷನ್ ಡ್ರಾಮಾವನ್ನು ನಿರ್ದೇಶಿಸುತ್ತಿದ್ದಾರೆ. ತರುಣ್ ಶಿವಪ್ಪ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಆರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಜೊತೆ ಉಪ್ಪಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.