
ನಿರ್ದೇಶಕ ಪುರುಷೋತ್ತಮ್ ಓಂಕಾರ್ ಅವರು ‘ಬೀದಿ ಬದುಕು’ (Beedi Baduku) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈವರೆಗೂ ಬಹುತೇಕ ಭಕ್ತಿಪ್ರಧಾನ ಸಿನಿಮಾಗಳಿಂದ ಗುರುತಿಸಿಕೊಂಡ ಅವರು ಈಗ ಒಂದು ಡಿಫರೆಂಟ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಚಿಂದಿ ಆಯುವ ಮಹಿಳೆಯ ಬದುಕಿನ ಕಥೆ ಇಟ್ಟಕೊಂಡು ಅವರು ‘ಬೀದಿ ಬದುಕು’ ಸಿನಿಮಾ ಮಾಡಿದ್ದಾರೆ. ನಟಿ ರೇಖಾ ಸಾಗರ್ (Rekha Sagar) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಜ್ ಭಾಸ್ಕರ್ ಅವರ ಸಂಗೀತ, ಮುತ್ತುರಾಜ್ ಅವರ ಛಾಯಾಗ್ರಹಣ, ಅನಿಲ್ ಅವರ ವಿ.ಎಫ್.ಎಕ್ಸ್. ಮತ್ತು ಸಂಕಲನ ಈ ಚಿತ್ರಕ್ಕಿದೆ.
ರಸ್ತೆ ಬದಿಯಲ್ಲಿ ಚಿಂದಿ ಆಯುತ್ತ ಜೀವನ ನಡೆಸುವ ಮಹಿಳೆಯೊಬ್ಬಳ ಬದುಕು ಹೇಗಿರುತ್ತದೆ? ತನ್ನ ಪುಟ್ಟ ಮಗನಿಗಾಗಿ ಆಕೆ ಪಡುವ ಕಷ್ಟಗಳು ಹೇಗಿರುತ್ತವೆ ಎಂಬಿತ್ಯಾದಿ ಅಂಶಗಳನ್ನು ‘ಬೀದಿ ಬದುಕು’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ನಟಿ ರೇಖಾ ಸಾಗರ್ (ರೇಖಾರಾಣಿ) ಅವರು ನಾಯಕಿಯಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.
‘ಬೀದಿ ಬದುಕು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟಿ ರೇಖಾ ಸಾಗರ್, ನಿರ್ದೇಶಕ ಪುರುಷೋತ್ತಮ್, ರಾಜ್ ಭಾಸ್ಕರ್, ಗಣೇಶ್ ರಾವ್ ಕೇಸರ್ಕರ್, ಸಂಕಲನಕಾರ ಅನಿಲ್, ಮಾ. ಸಾಕೇತ್, ಡಾ. ರೂಪೇಶ್ ಮುಂತಾದವರು ಹಾಜರಿದ್ದರು. ಸಾಕಷ್ಟು ಸೀರಿಯಲ್ಗಳಲ್ಲಿ ನಟಿಸಿದ ಅನುಭವ ರೇಖಾ ಸಾಗರ್ ಅವರಿಗೆ ಇದೆ. ಕುಡುಕ ಗಂಡನ ಉಪಟಳದ ನಡುವೆ ತನ್ನ ಮಗನಿಗಾಗಿ ಚಿಂದಿ ಆಯುವ ಮಹಿಳೆಯು ಏನೆಲ್ಲ ಕಷ್ಟಪಡುತ್ತಾಳೆ ಎಂಬುದೇ ‘ಬೀದಿ ಬದುಕು’ ಸಿನಿಮಾದ ಕಥಾಸಾರಾಂಶ.
ವಿಶೇಷ ಏನೆಂದರೆ ನಿಜವಾದ ಸ್ಲಂ, ಗುಡಿಸಲುಗಳು, ಸ್ಮಶಾನ ಮತ್ತು ಆಸ್ಪತ್ರೆಯಲ್ಲಿ ‘ಬೀದಿ ಬದುಕು’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ‘ಎಲ್ಲ ರಿಯಲ್ ಲೊಕೇಶನ್ಗಳಲ್ಲಿ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೇ, ಇಡೀ ಸಿನಿಮಾವನ್ನು ಸಿಂಕ್ ಸೌಂಡ್ನಲ್ಲಿ ಮಾಡಿದ್ದೇವೆ’ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ದಲ್ಲಿ ವಾಟರ್ ಕ್ಯಾನ್: ಈ ರೀತಿ ತಪ್ಪು ಮಾಡಿದ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿದೆ
ಸಿನಿಮಾದ ಶೂಟಿಂಗ್ ಅನುಭವವನ್ನು ನಟಿ, ನಿರ್ಮಾಪಕಿ ರೇಖಾ ಸಾಗರ್ ಅವರು ಹಂಚಿಕೊಂಡರು. ‘ಈ ಪಾತ್ರವನ್ನು ನಾನೇ ಮಾಡಬೇಕೆಂದು ಸವಾಲಾಗಿ ತೆಗೆದುಕೊಂಡೆ. ಸ್ಲಂಗಳಿಗೆ ಹೋಗಿ ಅವರು ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಂಡೆ. ಇರುವವರು ಇಲ್ಲವರಿಗೆ ಸಹಾಯ ಮಾಡಬೇಕು ಎಂಬುದೇ ನಮ್ಮ ಚಿತ್ರದ ಆಶಯ. ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಸದ್ಯದಲ್ಲೇ ರಿಲೀಸ್ ಮಾಡುತ್ತಿದ್ದೇವೆ’ ಎಂದು ರೇಖಾ ಸಾಗರ್ ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.