AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raju Talikote: ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು ರಾಜು ತಾಳಿಕೋಟೆ ಅಂತ್ಯಕ್ರಿಯೆ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯ ಖಬರಸ್ತಾನದಲ್ಲಿ ರಾಜು ತಾಳಿಕೋಟೆ ಅವರ ಅಂತ್ಯಕ್ರಿಯೆ ನೆರವೇರಿತು. ರಾಜು ತಾಳಿಕೋಟೆ ಜೊತೆ ನಾಟಕಗಳಲ್ಲಿ ವೇದಿಕೆ ಹಂಚಿಕೊಂಡಿದ್ದ ಅನೇಕ ಕಲಾವಿದರು, ಸ್ಥಳೀಯ ನಾಯಕರು ಅಂತಿಮ ನಮನ ಸಲ್ಲಿಸಿದದರು. ಶಿವಾನಂದ ಪಾಟೀಲ್, ಉಮಾಶ್ರೀ, ಅಶೋಕ ಮನಗೂಳಿ, ಎ.ಎಸ್. ಪಾಟೀಲ್ ನಡಹಳ್ಳಿ ಕೂಡ ರಂಗಾಶ್ರಮಕ್ಕೆ ಬಂದು ಅಂತಿಮ ದರ್ಶನ ಪಡೆದರು.

Raju Talikote: ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು ರಾಜು ತಾಳಿಕೋಟೆ ಅಂತ್ಯಕ್ರಿಯೆ
Raju Talikote
ಅಶೋಕ ಯಡಳ್ಳಿ, ವಿಜಯಪುರ
| Updated By: ಮದನ್​ ಕುಮಾರ್​|

Updated on: Oct 14, 2025 | 8:10 PM

Share

‘ಕಲಿಯುಗದ ಕುಡುಕ’ ನಾಟಕದ ಮೂಲಕ ಉತ್ತರ ಕರ್ನಾಟಕದಲ್ಲಿ ಕ್ಯಾಸೆಟ್ ಕಿಂಗ್ ಎಂದು ಹೆಸರಾಗಿದ್ದ ನಟ ರಾಜು ತಾಳಿಕೋಟೆ (Raju Talikote) ಉಸಿರು ನಿಲ್ಲಿಸಿದ್ದಾರೆ . ರಂಗಭೂಮಿ ಬಳಿಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ನಗುವಿನ ಹೊಳೆ ಹರಿಸಿದ್ದ ತಾಳಿಕೋಟೆ ತಮ್ಮ ನಗು ನಿಲ್ಲಿಸಿದ್ದಾರೆ‌. ಹೃದಯಾಘಾತದಿಂದ ಸಾವನ್ನಪ್ಪಿದ ತಾಳಿಕೋಟೆ ಅಂತ್ಯ ಸಂಸ್ಕಾರ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯ ಖಬರಸ್ತಾನದಲ್ಲಿ ನೆರವೇರಿತು. ಮುಸ್ಲಿಂ (Muslim) ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

ಹಾಸ್ಯ ಭರಿತ ನಾಟಕಗಳು, ಆಡಿಯೋ ಕ್ಯಾಸೇಟ್‌ಗಳು, ತಮ್ಮ ಹಾಸ್ಯಭರಿತ ನಟನಾ ಶೈಲಿಯಿಂದ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದಿದ್ದ ರಾಜು ತಾಳಿಕೋಟೆ ವಿಧಿವಶರಾಗಿದ್ದಾರೆ. ಸಿನಿಮಾ ಶೂಟಿಂಗ್ ಸಲುವಾಗಿ ಉಡುಪಿಗೆ ತೆರಳಿದ್ದ ರಾಜು ತಾಳಿಕೋಟೆಗೆ ಅ.13ರಂದು ಹೃದಯಾಘಾತ ಆಗಿತ್ತು. ಮನಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ‌‌.

ಧಾರವಾಡರ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆಯವರ ಮೃತದೇಹವನ್ನ ಧಾರವಾಡಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಗೀತಗಾಯನದ ಮೂಲಕ ಕಲಾವಿದರು ತಾಳಿಕೋಟೆ ನಿಧನಕ್ಕೆ ಕಂಬಿನಿ ಮಿಡಿದರು. ಧಾರವಾಡ ರಂಗಾಯಣದಲ್ಲಿ 2 ಗಂಟೆಗಳ ಅಂತಿಮ ದರ್ಶನ ಮುಗಿದ ಬಳಿಕ ಮೃತದೇಹವನ್ನು ವಿಜಯಪುರ ಜಿಲ್ಲೆಯ ಚಿಕ್ಕ ಸಿಂದಗಿಯ ತೋಟದ ಮನೆಯಾದ ರಂಗಾಶ್ರಮಕ್ಕೆ ತರಲಾಯಿತು. ಮೃತದೇಹದ ಆಗಮನವಾಗುತ್ತಿದ್ದಂತೆ ಸಹೋದರರು, ಇಬ್ಬರು ಪತ್ನಿಯರು, ಸಹೋದರಿಯರು, ಮೊಮ್ಮಕ್ಕಳು ಬಿಕ್ಕಿಬಿಕ್ಕಿ ಅತ್ತು ಕಣ್ಣೀರಾದರು. ಅವರ ಸಹೋದರಿಯರು, ಒಡನಾಡಿಗಳು ಸಹ‌ಕಲಾವಿದರು ರಾಜೂ ತಾಳಿಕೋಟೆ ನೆನಪುಗಳನ್ನು ನೆನೆದರು.

ರಾಜು ತಾಳಿಕೋಟೆಯವರ ಜೊತೆಗೆ ನಾಟಕಗಳಲ್ಲಿ ವೇದಿಕೆ ಹಂಚಿಕೊಂಡಿದ್ದ ಅನೇಕ ರಂಗಭೂಮಿ ಕಲಾವಿದರು, ಸ್ಥಳೀಯ ನಾಯಕರು ಅಂತಿಮ ದರ್ಶನ ಪಡೆದರು. ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವೆ, ನಟಿ ಉಮಾಶ್ರೀ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸಹ ರಂಗಾಶ್ರಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಈ ವೇಳೆ ಸಚಿವ ಶಿವಾನಂದ ಪಾಟೀಲ್ ರಾಜು ತಾಳಿಕೋಟೆಯ ಕಲಾಸೇವೆಯನ್ನ ಶ್ಲಾಘಿಸಿದರು. ಹಿರಿಯ ನಟಿ ಉಮಾಶ್ರೀ ಅವರು ರಾಜೂ ತಾಳಿಕೋಟೆ ಅವರೊಂದಿಗೆ ನಟಿಸಿದ ನಾಟಕಗಳ ಕುರಿತು ಹೇಳಿದರು. ರಾಜೂ ತಾಳಿಕೋಟೆ ಸಾಯೋ ವಯಸ್ಸಲ್ಲ ಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: ಹೃದಯಾಘಾತ ಆಗುವುದಕ್ಕೂ ಮುನ್ನ ರಾಜು ತಾಳಿಕೋಟೆ ಸ್ಥಿತಿ ಹೇಗಿತ್ತು? ವಿವರಿಸಿದ ಶೈನ್ ಶೆಟ್ಟಿ

ಮುಸ್ಲಿಂ ಸಂಪ್ರದಾಯದ ವಿಧಿಗಳನ್ನು ನೆರವೇರಿಸಲಾಯಿತು. ತೋಟದ ಮನೆಯಿಂದ ಮೃತ ದೇಹವನ್ನು ಮೆರವಣಿಗೆ ಮೂಲಕ ಚಿಕ್ಕ ಸಿಂದಗಿ ಗ್ರಾಮದ ಖಬರಸ್ತಾನಕ್ಕೆ ತೆಗೆದುಕೊಂಡು ಬರಲಾಯಿತು. ಅಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಬಳಿಕ ಅಂತಿಮ ಕ್ರಿಯಾ ವಿಧಾನಗಳು ನಡೆದವು. ಈ ವೇಳೆ ಕಲಾವಿದರು, ಗ್ರಾಮಸ್ಥರು ಸೇರಿದಂತೆ, ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಗುವಿನ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.