ಕನ್ನಡಿಗರ ಪಾಲಿಗೆ ಇದೊಂದು ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಎದುರಾಗಿದೆ. ಇನ್ನೊಂದು ಕಡೆ ಕನ್ನಡ ರಾಜ್ಯೋತ್ಸವ ಕೂಡ ಬಂದಿದೆ. ಬಂಗಾರದಂತಹ ಮನುಷ್ಯನನ್ನು ಕಳೆದುಕೊಂಡಿದ್ದಕ್ಕೆ ಅಳಬೇಕೋ ಅಥವಾ ನೋವು ಬದಿಗಿಟ್ಟು ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೋ ತಿಳಿಯುತ್ತಿಲ್ಲ. ಪುನೀತ್ ಅವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಇದ್ದ ಗೌರವ ಅಪಾರ. ಅವರು ನಟಿಸಿದ್ದ ‘ವೀರ ಕನ್ನಡಿಗ’ ಸಿನಿಮಾದಲ್ಲಿ ಕನ್ನಡಿಗರ ಹೋರಾಟದ ಕಥೆಯನ್ನು ತೋರಿಸಲಾಗಿತ್ತು. ಅಭಿಮಾನಿಗಳ ಪಾಲಿಗೆ ಆ ಚಿತ್ರ ಈಗಲೂ ಅಚ್ಚುಮೆಚ್ಚು.
2004ರಲ್ಲಿ ‘ವೀರ ಕನ್ನಡಿಗ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಪುನೀತ್ ಎರಡು ಪಾತ್ರ ನಿಭಾಯಿಸಿದ್ದರು. ತಂದೆ ಮತ್ತು ಮಗನ ಪಾತ್ರಗಳಲ್ಲಿ ಅವರು ಅತ್ಯುತ್ತಮವಾಗಿ ನಟಿಸಿದ್ದರು. ಆ ಚಿತ್ರದ ಕಥೆ ಕನ್ನಡಿಗರ ಅಸ್ತಿತ್ವದ ಕುರಿತಾಗಿತ್ತು. ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗುವ ಕನ್ನಡಿಗರು ಅಲ್ಲಿ ಹೇಗೆಲ್ಲ ಕಷ್ಟ ಅನುಭವಿಸುತ್ತಾರೆ? ಅವರ ಮೇಲೆ ಬೇರೆ ಭಾಷಿಕರು ಹೇಗೆ ದಬ್ಬಾಳಿಕೆ ನಡೆಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು.
‘ವೀರ ಕನ್ನಡಿಗ’ ಸಿನಿಮಾದ ಕಥಾನಾಯಕ ಮುನ್ನಾ ಎಂಬ ಪಾತ್ರದಲ್ಲಿ ಒಂದು ಕಿಚ್ಚು ಇತ್ತು. ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವ ಗುಣ ಇತ್ತು. ಅದರಲ್ಲೂ ‘ಜೀವ ಕನ್ನಡ.. ದೇಹ ಕನ್ನಡ..’ ಹಾಡಿನ ಮೂಲಕ ಪುನೀತ್ ಎಲ್ಲರ ಮನದಲ್ಲೂ ಒಂದು ಬಗೆಯ ಕಿಡಿ ಹೊತ್ತಿಸಿದ್ದರು. ಈಗಲೂ ಆ ಹಾಡನ್ನು ಕೇಳಿದರೆ ಪುಳಕ ಆಗುತ್ತದೆ. ಆ ಗೀತೆಗೆ ಹಂಸಲೇಖ ಸಾಹಿತ್ಯ ಬರೆದು, ಚಕ್ರಿ ಸಂಗೀತ ನಿರ್ದೇಶನ ಮಾಡಿದ್ದರು. ಮೆಹರ್ ರಮೇಶ್ ನಿರ್ದೇಶನದಲ್ಲಿ ‘ವೀರ ಕನ್ನಡಿಗ’ ಸಿನಿಮಾ ಮೂಡಿಬಂದಿತ್ತು. ಇತ್ತೀಚೆಗೆ ನಿಧನರಾದ ನಟ ಸತ್ಯಜಿತ್ ಅವರು ಈ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದರು. ಬುಲೆಟ್ ಪ್ರಕಾಶ್ ಎಂದಿನಂತೆ ಕಾಮಿಡಿ ಪಾತ್ರ ಮಾಡಿದ್ದರು. ಈ ಯಾವ ನಟರು ಕೂಡ ಈಗ ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ.
ಆ ಸಿನಿಮಾ ಬಂದು 17 ವರ್ಷ ಕಳೆದಿದೆ. ಆದರೂ ‘ಜೀವ ಕನ್ನಡ ದೇಹ ಕನ್ನಡ..’ ಹಾಡಿನ ಹವಾ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಈ ಗೀತೆ ಮೊಳಗುತ್ತದೆ. ಕನ್ನಡಿಗರ ಪಾಲಿಗೆ ಡಾ. ರಾಜ್ಕುಮಾರ್ ಅವರು ಮಾದರಿ ವ್ಯಕ್ತಿ ಆಗಿದ್ದರು. ಅವರ ಗುಣಗಳನ್ನೇ ಪಾಲಿಸುವ ಪುನೀತ್ ರಾಜ್ಕುಮಾರ್ ರೂಪದಲ್ಲಿ ಜನರು ಅಣ್ಣಾವ್ರನ್ನು ಕಾಣುತ್ತಿದ್ದರು. ಈ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಇಬ್ಬರು ಮಹಾನ್ ಪುರುಷರು ಅತಿಯಾಗಿ ನೆನಪಾಗುತ್ತಿದ್ದಾರೆ.
ಇದನ್ನೂ ಓದಿ:
Puneeth Rajkumar: ಅಶ್ಲೀಲ ಪದಗಳಿಂದ ಪುನೀತ್ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್ ಪುತ್ರಿ ಸಾನ್ವಿ ಗರಂ
Puneeth Rajkumar: ಶಿವಣ್ಣನ ಎದುರು ಪುನೀತ್ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು