ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ನವೆಂಬರ್ 3 ರಂದು ದೋಷಾರೋಪ ನಿಗದಿ
Renuka Swamy case: ರೇಣುಕಾ ಸ್ವಾಮಿ ಕೊಲೆಯಾದ ಒಂದೂವರೆ ವರ್ಷದ ಬಳಿಕ ಆರೋಪಿಗಳ ಮೇಲೆ ದೋಷಾರೋಪ ನಿಗದಿ ಆಗಲಿದೆ. ಇಂದು ದೋಷಾರೋಪ ನಿಗದಿ ಆಗಲಿತ್ತು ಆದರೆ ಅದು ನವೆಂಬರ್ 3ಕ್ಕೆ ಮುಂದೂಡಲಾಗಿದೆ. ನವೆಂಬರ್ 3 ರಂದು ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಮೇಲೆ ದೋಷಾರೋಪ ನಿಗದಿ ಇಂದು (ಅಕ್ಟೊಭರ್ 31) ಆಗುವುದಕ್ಕಿತ್ತು. ಆದರೆ ದೋಷಾರೋಪ ನಿಗದಿಯನ್ನು ನ್ಯಾಯಾಲಯವು ನವೆಂಬರ್ 3ಕ್ಕೆ ಮುಂದೂಡಲಾಗಿದೆ. ಇಂದು ದರ್ಶನ್ ಹಾಗೂ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿದಿದ್ದು, ದೋಷಾರೋಪ ನಿಗದಿಯನ್ನು ಮುಂದೂಡಲಾಗಿದೆ. ಅಲ್ಲದೆ ದೋಷಾರೋಪ ನಿಗದಿ ಮಾಡುವ ದಿನದಂದು ಕಡ್ಡಾಯವಾಗಿ ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರೇಣುಕಾ ಸ್ವಾಮಿ ನಿಧನವಾದ ಸುಮಾರು ಒಂದೂವರೆ ವರ್ಷದ ಬಳಿಕ ಇದೀಗ ದೋಷಾರೋಪ ನಿಗದಿ ಆಗಲಿದೆ. ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಮೇಲೆ ಪೊಲೀಸರು ಹೇರಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ಬಳಿಕ ನ್ಯಾಯಾಧೀಶರು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರೆಯೇ ಎಂದು ಆರೋಪಿಗಳಿಗೆ ಕೇಳುತ್ತಾರೆ. ಒಂದು ವೇಳೆ ಆರೋಪಿಗಳು ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗಲಿದೆ.
ಒಂದೊಮ್ಮೆ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ. ಸಾಕ್ಷ್ಯಗಳ ವಿಚಾರಣೆಗೆ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಸಾಕಷ್ಟು ಸಂಖ್ಯೆಯ ಸಾಕ್ಷ್ಯಗಳು ಇರುವ ಕಾರಣ ಸಹಜವಾಗಿಯೇ ಎಲ್ಲರ ವಿಚಾರಣೆ, ಮರು ವಿಚಾರಣೆಗಳಿಗೆ ಸುಮಾರು ಒಂದಿರಂದ ಎರಡು ವರ್ಷ ಸಮಯ ಹಿಡಿಯುವ ಸಾಧ್ಯತೆ ಇದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು
ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಪಾಲಿಗೆ ಅತ್ಯಂತ ಮಹತ್ವದ ದಿನ ಆಗಿರಲಿದೆ. ಅಂದು ನಿಗದಿ ಆಗುವ ಆರೋಪಗಳ ಮೇಲೆಯೇ ಮುಂದಿನ ವಿಚಾರಣೆ ನಡೆಯಲಿದೆ. ಪೊಲೀಸರು ಅಥವಾ ತನಿಖಾಧಿಕಾರಿಗಳು ಈ ದೋಷಾರೋಪವನ್ನು ನಿಗದಿ ಮಾಡಲಿದ್ದಾರೆ. ದರ್ಶನ್ ವಿರುದ್ಧ ಯಾವ ಯಾವ ಆರೋಪಗಳನ್ನು ಹೊರಿಸಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಈಗ ಜೈಲಿನಲ್ಲಿರುವ ಏಳು ಜನರು ಮಾತ್ರವೇ ಅಲ್ಲದೆ ಪ್ರಕರಣದ ಎಲ್ಲ ಆರೋಪಿಗಳ ಮೇಲೂ ದೋಷಾರೋಪದ ನಿಗದಿ ಆಗಲಿದೆ. ಇವರಲ್ಲಿ ಕೆಲವರ ಹೆಸರನ್ನು ಕೈಬಿಡುವ ಸಾಧ್ಯತೆಯೂ ಸಹ ಇದೆ.
ದರ್ಶನ್ ಪರ ವಕೀಲರು ಈ ಹಿಂದೆಯೇ ವಿಚಾರಣೆ ವೇಳೆ ಶೀಘ್ರವಾಗಿ ದೋಷಾರೋಪ ನಿಗದಿ ಮಾಡಿ ಸಾಕ್ಷ್ಯಗಳ ವಿಚಾರಣೆ ಆರಂಭ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ಸರ್ಕಾರಿ ವಕೀಲರು ದೋಷಾರೋಪ ನಿಗದಿಗೆ ಸಮುಯ ಕೇಳಿದ್ದರು. ದರ್ಶನ್ ಪರ ವಕೀಲರು, ತಾವು ವಿಚಾರಣೆ ಎದುರಿಸಿಯೇ ನ್ಯಾಯಾಲಯದಿಂದ ಹೊರಬರುವುದಾಗಿ ಹೇಳಿದ್ದರು. ಅಲ್ಲದೆ, ನ್ಯಾಯಾಧೀಶರು ಸಹ, ಎರಡೂ ಕಡೆಯವರು ಸಾಕ್ಷ್ಯಗಳ ವಿಚಾರಣೆಗೆ ಸಹಕರಿಸಬೇಕು ಎಂದು ಮನವಿಯನ್ನು ಸಹ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Fri, 31 October 25




