ದರ್ಶನ್​​ಗೆ ಗಲ್ಲು ಶಿಕ್ಷೆ ಕೊಡಿ: ಕೋರ್ಟ್​​ನಲ್ಲಿ ಅಬ್ಬರಿಸಿದ ದರ್ಶನ್ ಪರ ವಕೀಲ

Darshan Thoogudeepa: ನಟ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅವರಿಗೆ ಹಾಸಿಗೆ-ದಿಂಬು ಕೊಡಬೇಕೋ ಬೇಡವೊ ಎಂಬ ಬಗ್ಗೆ ಕಳೆದ ಒಂದೂವರೆ ತಿಂಗಳಿಂದಲೂ ವಿಚಾರಣೆ ವಾದ-ಪ್ರತಿವಾದ ನಡೆಯುತ್ತಲೇ ಇದೆ. ಇಂದಿನ ವಿಚಾರಣೆ ವೇಳೆ, ದರ್ಶನ್​​ ಅನ್ನು ಬೇಕಿದ್ದರೆ ನೇಣಿಗೆ ಹಾಕಿ ಎಂದು ದರ್ಶನ್ ಪರ ವಕೀಲರೆ ರೋಷಾವೇಶದಲ್ಲಿ ಹೇಳಿದರು. ಅದಕ್ಕೆ ಕಾರಣವಾಗಿದ್ದು ಏನು? ಇಲ್ಲಿದೆ ಮಾಹಿತಿ...

ದರ್ಶನ್​​ಗೆ ಗಲ್ಲು ಶಿಕ್ಷೆ ಕೊಡಿ: ಕೋರ್ಟ್​​ನಲ್ಲಿ ಅಬ್ಬರಿಸಿದ ದರ್ಶನ್ ಪರ ವಕೀಲ
Darshan Thoogudeepa

Updated on: Oct 25, 2025 | 6:58 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹಾಸಿಗೆ, ದಿಂಬು, ಕನ್ನಡ, ಬಾಚಣಿಗೆ ಇನ್ನೂ ಕೆಲವು ಸವಲತ್ತುಗಳಿಗಾಗಿ ಬೇಡಿಕೆ ಇಟ್ಟಿದ್ದು, ನ್ಯಾಯಾಲಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಇದರ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಜೈಲಿನ ಪರಿಸ್ಥಿತಿ, ಜೈಲಿನಲ್ಲಿರುವ ದರ್ಶನ್ ಪರಿಸ್ಥಿತಿ ಪರಾಮರ್ಶಿಸಲು ಕಾನೂನು ಪ್ರಾಧಿಕಾರ ಸಮಿತಿ ಜೈಲಿಗೆ ಭೇಟಿ ನೀಡಿ, ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿತ್ತು. ಇಂದು ಹಾಸಿಗೆ-ದಿಂಬು ಕೊಡುವ ವಿಚಾರವಾಗಿ ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್ ವಿಚಾರಣೆ ನಡೆದಿದ್ದು, ದರ್ಶನ್ ಪರ ವಕೀಲ ಸುನಿಲ್ ಅವರು ಆವೇಶಭರಿತವಾಗಿ ವಾದ ಮಂಡಿಸಿದರು. ‘ನಾಡಿದ್ದೆ ದರ್ಶನ್​​ಗೆ ಗಲ್ಲು ಶಿಕ್ಷೆ ಬೇಕಾದರೆ ಕೊಡಿ’ ಎಂದು ಸಿಟ್ಟಿನಲ್ಲಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನು ಜೈಲಧಿಕಾರಿಗಳು ದಾರಿ ತಪ್ಪಿಸಿದ್ದಾರೆ ಎಂದ ಸುನಿಲ್, ನಿನ್ನೆ ಕೆಲ ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದರು ಮತ್ತೆ ಅದೇ ಸನ್ನಿವೇಶ ಜೈಲಿನಲ್ಲಿ ಕಂಡು ಬಂದಿದೆ. ಅದೇ ಜೈಲಿನಲ್ಲಿರುವ ಗುಬ್ಬಚ್ಚಿ ಸೀನ ಜೈಲಿನಲ್ಲಿ ಬರ್ತ್​​ ಡೇ ಮಾಡಿಕೊಳ್ಳುತ್ತಾನೆ. ಆದರೆ ದರ್ಶನ್​​ಗೆ ಸಾಮಾನ್ಯ ಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿದೆ. ಸ್ವತಃ ಸುಪ್ರೀಂಕೋರ್ಟ್ ಹೇಳಿದೆ ಕನಿಷ್ಟ ಸೌಲಭ್ಯಗಳನ್ನು ನೀಡಬೇಕು ಎಂದು, ಸುಪ್ರೀಂಕೋರ್ಟ್ ಹೆಸರನ್ನು ಬೆದರಿಸಲು ಬಳಸಬೇಡಿ’ ಎಂದು ಸುನಿಲ್ ಗರಂ ಆದರು.

ಕನ್ನಡಿ, ಬಾಚಣಿಗೆ ಕೊಡದ ಬಗ್ಗೆ ಮಾತನಾಡಿ, ‘ಭದ್ರತೆ ಕಾರಣಕ್ಕೆ ಅವುಗಳನ್ನು ಕೊಡುತ್ತಿಲ್ಲ ಎಂಬುದು ಪೊಳ್ಳು ವಾದ. ಈಗಾಗಲೇ ಕೊಲೆ ಆರೋಪದ ಮೇಲೆ ಒಳಗೆ ಇದ್ದಾರೆ. ಅವರೇನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಆ ಉದ್ದೇಶವೂ ಅವರಿಗೆ ಇಲ್ಲ’ ಎಂದರು. ಮುಂದುವರೆದು, ‘ವಾಕಿಂಗ್ ಹೋದರೆ ಪಕ್ಕದ ಅಪಾರ್ಟ್​​ಮೆಂಟ್​ನಿಂದ ಫೋಟೊ ತೆಗೆಯುತ್ತಾರೆ ಎನ್ನುವುದಾದರೆ ದರ್ಶನ್ ಅನ್ನು ಮುಖ್ಯ ಜೈಲಿಗೆ ಶಿಫ್ಟ್ ಮಾಡಿ, ಅದಕ್ಕೆ ದೊಡ್ಡ ಗೋಡೆಗಳಿವೆ. ನಾವೂ ಸಹ ಅದನ್ನೇ ತಾನೆ ಕೇಳುತ್ತಿರುವುದು’ ಎಂದರು.

ಇದನ್ನೂ ಓದಿ:‘ನನ್ನ ಸಕ್ಸಸ್​ಗೆ ದರ್ಶನ್ ಕಾರಣ’; ಬಿಗ್ ಬಾಸ್​ ರಘು ಮಾತು

ಸರ್ಕಾರಿ ವಕೀಲರ ವಾದ ಮಂಡನೆ ಬಳಿಕ ಮತ್ತೆ ವಾದ ಮಂಡಿಸಿದ ದರ್ಶನ್ ಪರ ವಕೀಲ ಸುನಿಲ್, ‘ಆರೋಪಿಗಳು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ನ್ಯಾಯಸಮ್ಮತ ವಿಚಾರಣೆ ನಡೆಯಬೇಕೆಂಬುದು ನಿಯಮ. ಅದಕ್ಕಾಗಿ ಮೂರು ನಾಲ್ಕು ವರ್ಷ ಜೈಲಿನಲ್ಲಿರಲು ಹಿಂಜರಿಯುವುದಿಲ್ಲ. ನಾಳೆಯೇ ದೋಷಾರೋಪ ನಿಗದಿ ಮಾಡಿ, ನಾಡಿದ್ದೇ ಗಲ್ಲುಶಿಕ್ಷೆ ಕೊಡಿ. ಶೀಘ್ರ ವಿಚಾರಣೆಗೆ ನಮ್ಮ ಆಕ್ಷೇಪವಿಲ್ಲ’ ಎಂದು ವಕೀಲ ಸುನೀಲ್‌ ಆವೇಶಭರಿತವಾಗಿ ವಾದಿಸಿದರು.

ಮುಂದುವರೆದು, ‘ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ನಂತರ ಇಪ್ಪತ್ತು ವಿಚಾರಣೆಗಳು ನಡೆದಿವೆ. ಎರಡೂವರೆ ತಿಂಗಳು ಸಮಯ ಹಾಳು ಮಾಡಿದ್ದಾರೆ. ನಾವು ಟ್ರಯಲ್ ಆರಂಭ ಮಾಡಿ, ಬೇಗ ಮಾಡಿ ಎಂದು ಹೇಳಬೇಕು. ನಾವು (ದರ್ಶನ್) ಜೈಲಿನಲ್ಲಿ ಇರುವುದಕ್ಕೆ ಸಿದ್ದರಿದ್ದೇವೆ. ಸುಪ್ರೀಂಕೋರ್ಟ್ ಈ ಪ್ರಕರಣ ದಲ್ಲಿ ನಿಗಾ ಇಟ್ಟಿದ್ದು, ವಿಚಾರಣೆ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಸೂಚನೆ ನೀಡಿದೆ. ನಾಳೆಯೇ ವಿಚಾರಣೆ ಫಿಕ್ಸ್ ಮಾಡಿ, ನಾಳೇ ತೀರ್ಪು ಕೊಡಿ. ನಾಡಿದ್ದು ಶಿಕ್ಷೆ ಕೊಟ್ಟು ಮರಣ ದಂಡನೆ ಬೇಕಾದರೂ ಕೊಡಿ, ನಾವು ಸಿದ್ದ ಇದ್ದೇವೆ’ ಎಂದರು ವಕೀಲ ಸುನಿಲ್. ಅಂತಿಮವಾಗಿ ಹಾಸಿಗೆ-ದಿಂಬು ವಿಚಾರಣೆಯ ಆದೇಶವನ್ನು ಅಕ್ಟೋಬರ್ 29ಕ್ಕೆ ಕಾಯ್ದಿರಿಸಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ