4.30ರಿಂದ 6 ಮುಹೂರ್ತ, ನಾಲ್ವರು ಕಾಣಿಸುತ್ತಿಲ್ಲ: ಹೊಸ ಸಿನಿಮಾಗೆ ಡಿಫರೆಂಟ್ ಟೈಟಲ್
ಸಿನಿಮಾದ ಶೀರ್ಷಿಕೆ ಭಿನ್ನವಾಗಿದ್ದರೆ ಪ್ರೇಕ್ಷಕರ ಗಮನ ಸೆಳೆಯುವುದು ಚಿತ್ರತಂಡಕ್ಕೆ ಬಹಳ ಸುಲಭ ಆಗುತ್ತದೆ. ಹೊಸ ಸಿನಿಮಾಗೆ ‘4.30ರಿಂದ 6 ಮುಹೂರ್ತ, ನಾಲ್ವರು ಕಾಣಿಸುತ್ತಿಲ್ಲ’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಿತ್ರತಂಡದ ಬಗ್ಗೆ ಮಾಹಿತಿ ಇಲ್ಲಿದೆ.

‘ನೀಲಕಂಠ ಫಿಲ್ಮ್ಸ್’ ಮತ್ತು ‘ಧರ್ಮಶ್ರೀ ಎಂಟರ್ ಪ್ರೈಸಸ್’ ಮೂಲಕ ಹೊಸ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ವಿಭಿನ್ನವಾಗಿ ‘4.30ರಿಂದ 6 ಮುಹೂರ್ತ, ನಾಲ್ವರು ಕಾಣಿಸುತ್ತಿಲ್ಲ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಎಂ.ಎನ್. ಸುಚಿತ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು.
‘ರಥಾವರ’ ಖ್ಯಾತಿಯ ಧರ್ಮಶ್ರೀ ಮಂಜುನಾಥ್ ಮತ್ತು ಡಿ. ಯೋಗರಾಜ್ ಅವರು ‘4.30ರಿಂದ 6 ಮುಹೂರ್ತ, ನಾಲ್ವರು ಕಾಣಿಸುತ್ತಿಲ್ಲ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೂವೈ ಸುರೇಶ್ ಮತ್ತು ಶಿವರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಧರ್ಮಶ್ರೀ ಮಂಜುನಾಥ್ ಅವರ ಪುತ್ರ ಎಂ.ಎನ್. ಸುಚಿತ್ ನಾಯಕನಾಗಿರುವ ಈ ಸಿನಿಮಾಗೆ ಸಾತ್ವಿಕಾ ಅವರು ನಾಯಕಿ ಆಗಿದ್ದಾರೆ. ಅನಿಲ್ ಮತ್ತು ಧನ್ಯ ಅವರು ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ನೀಲಕಂಠ ಫಿಲ್ಮ್ಸ್’ ಮೂಲಕ ನಿರ್ಮಾಣ ಆಗುತ್ತಿರುವ 5ನೇ ಸಿನಿಮಾ ಇದು. ‘ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. 90ರ ದಶಕದ ಸಂಬಂಧಗಳು ಹೇಗಿತ್ತು ಎಂದು ತೋರಿಸುವ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲೇ ಹೆಚ್ಚಿನ ಭಾಗದ ಶೂಟಿಂಗ್ ನಡೆಯಲಿದೆ. ಹಾಡುಗಳ ಚಿತ್ರೀಕರಣ ಮಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ನಡೆಯಲಿದೆ.’ ಎಂದು ನಿರ್ಮಾಪಕ ಡಿ. ಯೋಗರಾಜ್ ತಿಳಿಸಿದರು.
ನಿರ್ದೇಶಕರಾದ ಪೂವೈ ಸುರೇಶ್, ಶಿವರಾಜ್, ಕಲಾವಿದರಾದ ಅನಿಲ್, ಧನ್ಯ, ರಮೇಶ್ ರೈ, ರೇಖಾದಾಸ್, ವಸ್ತ್ರ ವಿನ್ಯಾಸಕಿ ಸುಶೀಲ ಯೋಗರಾಜ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ‘ಈ ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಈ ಹಿಂದೆ ನಾನು ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ಸಿನಿಮಾ ಮೂಲಕ ಹೀರೋ ಆಗಿ ನಟಿಸುತ್ತಿದ್ದೇನೆ. ನಟನೆ, ಸಾಹಸ ಕಲಿತ್ತಿದ್ದೇನೆ’ ಎಂದು ಎಂ.ಎನ್. ಸುಚಿತ್ ಹೇಳಿದ್ದಾರೆ.
ಇದನ್ನೂ ಓದಿ: ‘ಹೇ ಪ್ರಭು’ ಸಿನಿಮಾದ ಮೋಟಿವೇಷನಲ್ ಹಾಡು ಬಿಡುಗಡೆ; ವೆಂಕಟ್ ಭಾರದ್ವಾಜ್ ನಿರ್ದೇಶನ
ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರು ಮಾತನಾಡಿ, ‘ನನ್ನ ಮಗನಿಗಾಗಿ ನಾನೇ ಒಂದು ಸಿನಿಮಾ ನಿರ್ಮಾಣ ಮಾಡುವುದು ಕಷ್ಟ ಇರಲಿಲ್ಲ. ಅವನು ಮೊದಲು ಉತ್ತಮ ಕಲಾವಿದ ಎಂದು ಕರೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾನೆ. ನಟನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




