Raghu Dixit Marriage: ಗಾಯಕಿ ವಾರಿಜಶ್ರೀ ಜೊತೆ ನೆರವೇರಿತು ರಘು ದೀಕ್ಷಿತ್ ಮದುವೆ
ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹಾಗೂ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು, ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸಡಗರದಿಂದ ಈ ವಿವಾಹ ನೆರವೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು 2ನೇ ಮದುವೆ ಆಗಿದ್ದಾರೆ. ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಇತ್ತೀಚೆಗಷ್ಟೇ ಸುದ್ದಿ ಹೊರಬಿದ್ದಿತ್ತು. ಆ ಬಗ್ಗೆ ಮಾಧ್ಯಮವೊಂದಕ್ಕೆ ರಘು ದೀಕ್ಷಿತ್ ಅವರು ಪ್ರತಿಕ್ರಿಯೆ ಕೂಡ ನೀಡಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ (Raghu Dixit Marriage) ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಈ ಜೋಡಿಗೆ ಅಭಿನಂದನೆ ತಿಳಿಸಲಾಗಿದೆ.
ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರಿಗೂ ಬೇಡಿಕೆ ಇದೆ. ಗಾಯಕಿಯಾಗಿ, ಕೊಳಲು ವಾದಕಿಯಾಗಿ ವಾರಿಜಶ್ರೀ ಅವರು ಖ್ಯಾತಿ ಗಳಿಸಿದ್ದಾರೆ. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಪರಿಚಯದಿಂದ ಪ್ರೀತಿ ಬೆಳೆದು, ಕುಟುಂಬದ ಒಪ್ಪಿಗೆ ಪಡೆದು ಅವರಿಬ್ಬರು ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ರಘು ದೀಕ್ಷಿತ್-ವಾರಿಜಶ್ರೀ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಘು ದೀಕ್ಷಿತ್ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಯಮುನಾ ಶ್ರೀನಿಧಿ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ‘ಕನ್ನಡ ನಾಡಿನ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಸಂಗೀತಗಾರ್ತಿ ವಾರಿಜಾ ವೇಣುಗೋಪಾಲ್ ಅವರ ವಿವಾಹದ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ಸುಂದರ ರಾಗಗಳಿಂದ ತುಂಬಿರಲಿ’ ಎಂದು ಅವರು ಹಾರೈಸಿದ್ದಾರೆ.
ಇದನ್ನೂ ಓದಿ: ಮೊದಲು ಆಚೆ ಹೋಗಿ ಎಂದು ತಳ್ಳಿದ್ದೆ; ಹಳೆ ಘಟನೆ ನೆನೆದ ರಘು ದೀಕ್ಷಿತ್
50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರಿಗೆ ಇದು 2ನೇ ಮದುವೆ. ಈ ಮೊದಲು (2005) ಅವರು ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ವಿವಾಹ ಆಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು. ಬಳಿಕ ಇನ್ನೊಂದು ಮದುವೆ ಬಗ್ಗೆ ರಘು ದೀಕ್ಷಿತ್ ಅವರು ಆಲೋಚನೆ ಮಾಡಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಮದುವೆ ಬಗ್ಗೆ ನಿರ್ಧರಿಸಿದರು. ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




