ನಟ ದರ್ಶನ್, ನಟಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಅನೇಕರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಎಲ್ಲರನ್ನೂ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಲಾಗಿದೆ. ವಿವಿಧ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ. ಈ ಮೂಲಕ ನೂರಾರು ಬಗೆಯ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇಂದು (ಜೂನ್ 19) ದರ್ಶನ್ (Darshan), ಪವಿತ್ರಾ ಗೌಡ ಮುಂತಾದ ಆರೋಪಿಗಳ ಡಿಎನ್‌ಎ ಟೆಸ್ಟ್ (DNA Test) ಮಾಡಿಸಲಾಗಿದೆ. ಅದಕ್ಕೆ ಪ್ರಮುಖ ಕಾರಣ ಕೂಡ ಇದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. ಒಟ್ಟು 9 ಆರೋಪಿಗಳ ಸ್ಯಾಂಪಲ್ಸ್ ಪಡೆದುಕೊಳ್ಳಲಾಗಿದೆ. ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲು ಹಾಗೂ ರಕ್ತದ ಮಾದರಿಯ ಜೊತೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೂದಲು, ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನುಎಫ್‌ಎಸ್ಎಲ್‌ಗೆ (ವಿಧಿ ವಿಜ್ಞಾನ ಪ್ರಯೋಗಾಲಯ) ಕಳುಹಿಸಲಾಗುತ್ತದೆ. ಒಂದು ವೇಳೆ, ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಆರೋಪಿಗಳ ಸ್ಯಾಂಪಲ್ ಜೊತೆ ಮ್ಯಾಚ್ ಆದರೆ ಅದು ಪ್ರಮುಖ ಸಾಕ್ಷ್ಯ ಆಗಲಿದೆ. ಆ ಕಾರಣದಿಂದ 9 ಆರೋಪಿಗಳ ಡಿಎನ್‌ಎ ಪರೀಕ್ಷೆ ಇಂದು ಮಾಡಿಸಲಾಗಿದೆ.
ಇದನ್ನೂ ಓದಿ: ‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಈ ಕೇಸ್ನಲ್ಲಿ ಎ1. ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಅಪಹರಿಸಿ, ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ಪವನ್, ವಿನಯ್ ಮುಂತಾದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಚಾರಣೆ ತೀವ್ರಗೊಂಡಂತೆಲ್ಲ ಅನೇಕ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.