ರೇಣುಕಾ ಸ್ವಾಮಿ ಕೊಲೆ, ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯನ್ನು ಖಂಡಿಸಿ ನಾಳೆ (ಜೂನ್ 12) ರಂದು ಚಿತ್ರದುರ್ಗದ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ಪ್ರತಿಭಟನೆ ನಡೆಸಲು ಮುಂದಾಗಿದೆ.

ಕ್ಷುಲ್ಲಕ ಕಾರಣಕ್ಕೆ ದರ್ಶನ್ (Darshan Thoogudeepa) ಹಾಗೂ ಅವನ ಸಹಚರರಿಂದ ಅಮಾನುಷವಾಗಿ ಹತ್ಯೆ ಆಗಿರುವ ಚಿತ್ರದುರ್ಗದ ನಿವಾಸಿ ರೇಣುಕಾ ಸ್ವಾಮಿಯ (Renuka Swamy) ಹತ್ಯೆ ಖಂಡಿಸಿ ನಾಳೆ (ಜೂನ್ 12) ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ನಿಶ್ಚಯಿಸಿದೆ. ಜೊತೆಗೆ ಇನ್ನೂ ಕೆಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ.
ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಲಿದ್ದು, ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ರೇಣುಕಾ ಸ್ವಾಮಿ ಹತ್ಯೆಯನ್ನು ಈಗಾಗಲೇ ಜಿಲ್ಲಾ ವೀರಶೈವ ಸಮಾಜ ಖಂಡಿಸಿದ್ದು, ನಾಳೆ ಜಿಲ್ಲೆಯ ಪ್ರಮುಖ ವೀರಶೈವ ನೇತಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಚಿತ್ರದುರ್ಗದ ನಿವಾಸಿಯಾಗಿದ್ದ ರೇಣುಕಾ ಸ್ವಾಮಿ ವೀರಶೈವ ಸಮುದಾಯದವರಾಗಿದ್ದು, ಅವರ ಸ್ನೇಹಿತರು, ಬಂಧುಗಳು ಹೇಳುವಂತೆ ಸೌಮ್ಯ ಸ್ವಭಾವದ ನಿರುಪದ್ರವಿ ವ್ಯಕ್ತಿಯಾಗಿದ್ದ. ಬಡ ಮಧ್ಯಮ ಕುಟುಂಬಕ್ಕೆ ಸೇರಿದ ರೇಣುಕಾ ಸ್ವಾಮಿ ಕಳೆದ ವರ್ಷವಷ್ಟೆ ವಿವಾಹವಾಗಿದ್ದ. ರೇಣುಕಾ ಸ್ವಾಮಿಯ ಪತ್ನಿ ಈಗ ಐದು ತಿಂಗಳ ಗರ್ಭಿಣಿ. ಮನೆಯಲ್ಲಿ ನಿವೃತ್ತ ತಂದೆ, ತಾಯಿ ವಯಸ್ಸಾದ ಇಬ್ಬರು ಅಜ್ಜಿಯರಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದು ಹೇಗೆ? ಕೊಲೆಯಾದಾಗ ಸ್ಥಳದಲ್ಲಿ ಇದ್ದವರ್ಯಾರು?
ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಈಗಾಗಲೇ ರೇಣುಕಾ ಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅವರ ಮನೆಯ ಪರಿಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ರೇಣುಕಾ ಸ್ವಾಮಿ ನಿವಾಸಕ್ಕೆ ಭೇಟಿ ನೀಡಬಹುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ 11 ಮಂದಿ ಇತರೆ ಸಹಚರರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ದರ್ಶನ್ ಹಾಗೂ ಆತನ ಸಹಚರರು ಮಾಡಿರುವ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಕೆಲವರು ಸಹ ದರ್ಶನ್ಗೆ ಶಿಕ್ಷೆಯಾಗಲಿ ಎನ್ನುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ