ಠಾಣೆಯಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು
ರೇಣುಕಾ ಸ್ವಾಮಿ ಎಂಬುವವರನ್ನು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಿದ ಆರೋಪದಲ್ಲಿ ಪವಿತ್ರಾ ಗೌಡ, ದರ್ಶನ್, ವಿ. ವಿನಯ್, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಆರ್. ನಾಗರಾಜು, ಕೆ. ಪವನ್ ಮುಂತಾದವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್ಗಳನ್ನು ತರಿಸಲಾಗಿದೆ.
ಅಭಿಮಾನಿ ರೇಣುಕಾ ಸ್ವಾಮಿ (Renuka Swamy) ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ (Darshan) ಹಾಗೂ ಅವರ ಸಹಚರರು ಇದ್ದಾರೆ. ಅಚ್ಚರಿ ಎಂದರೆ, ಠಾಣೆಗೆ ಹೊರಗಡೆಯಿಂದ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್ಗಳು ಬಂದಿವೆ! ಪೊಲೀಸರು ದೊನ್ನೆ ಬಿರಿಯಾನಿ (Donne Biriyani) ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಠಾಣೆಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಭೇಟಿ ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ರೇಣುಕಾ ಸ್ವಾಮಿ ಪತ್ನಿ ಅಳಲು:
ರೇಣುಕಾ ಸ್ವಾಮಿ ಹತ್ಯೆಯಿಂದ ಅವರ ಪತ್ನಿ ಸಹನಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರೀಗ 3 ತಿಂಗಳ ಗರ್ಭಿಣಿ ಆಗಿದ್ದು, ಪತಿಯ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ‘ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸಿ. ನಾನು ಮದುವೆ ಆಗಿ 1 ವರ್ಷ ಆಗಿದೆ. ನಾನು ಈಗ ಪ್ರೆಗ್ನೆಂಟ್. ನನ್ನ ಗಂಡನಿಗೆ ಹಿಂದೆ ಆಗಬಾರದಿತ್ತು. ಮಧ್ಯಾಹ್ನ ಫೋನ್ ಮಾಡಿದ್ರು. ಆದರೆ ಬೆಂಗಳೂರಿಗೆ ಹೋಗುವ ಕುರಿತು ಏನನ್ನೂ ಹೇಳಿರಲಿಲ್ಲ. ದರ್ಶನ್ ಆದರೂ ಆಗಲಿ, ಯಾರಾದ್ರೂ ಆಗಲಿ ನಮಗೆ ನ್ಯಾಯ ಬೇಕು. ದರ್ಶನ್ ಸ್ಟಾರ್ ಆಗಿರಬಹುದು. ನಮ್ಮ ಬಳಿ ಜನ ಇದ್ದಾರೆ. ನಾನು ಗರ್ಭಿಣಿ. ಮುಂದಿನ ಜೀವನ ಹೇಗೆ? ನನ್ನ ಗಂಡನ ಜೀವಕ್ಕೆ ಹಾನಿ ಆಗಬಾರದಿತ್ತು. ಎಚ್ಚರಿಕೆ ನೀಡಿ ಬಿಟ್ಟಿದ್ದರೆ ಸಾಕಿತ್ತು’ ಎಂದಿದ್ದಾರೆ ಸಹನಾ.
ಇದನ್ನೂ ಓದಿ: ಪವಿತ್ರಾ ಗೌಡ ಸಲುವಾಗಿ ದರ್ಶನ್ ಬಾಳಲ್ಲಿ ನಡೆಯಿತು ದೊಡ್ಡ ದುರಂತ
ಹತ್ಯೆ ನಡೆದಿದ್ದು ಯಾಕೆ?
ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂಬ ಆರೋಪ ಇದೆ. ಆ ಕಾರಣದಿಂದ ರೇಣುಕಾ ಸ್ವಾಮಿಯನ್ನು ದರ್ಶನ್ರ ಗ್ಯಾಂಗ್ ಅಪಹರಿಸಿತ್ತು. ಬೆಂಗಳೂರಿನಲ್ಲಿ ರೇಣುಕಾ ಸ್ವಾಮಿಯ ಹತ್ಯೆ ಮಾಡಲಾಯಿತು. ಬಳಿಕ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು ಎಂಬ ಆರೋಪವಿದೆ. ಈ ಕುರಿತು ವಿಚಾರಣೆ ತೀವ್ರವಾಗಿದೆ.
‘ಕೇವಲ ವಿಚಾರಣೆ ಸಲುವಾಗಿ ಮಾತ್ರ ದರ್ಶನ್ ಅವರನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಪ್ರತಿ ದಿನ ವಕೀಲರನ್ನು ಭೇಟಿ ಮಾಡಿಸಬೇಕು ಹಾಗೂ ಪ್ರತಿ 2 ದಿನಕ್ಕೆ ತನಿಖೆಯ ವಿವರವನ್ನು ಕೋರ್ಟ್ಗೆ ನೀಡಬೇಕು ಅಂತ ಜಡ್ಜ್ ಸೂಚನೆ ನೀಡಿದ್ದಾರೆ’ ಎಂದು ನಟ ದರ್ಶನ್ ಪರ ವಕೀಲ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.