
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan), ಪವಿತ್ರಾ ಗೌಡ ಮತ್ತು ಗ್ಯಾಂಗ್ ವಿರುದ್ಧ ಬುಧವಾರದಿಂದ (ಡಿಸೆಂಬರ್ 17) ಟ್ರಯಲ್ ಆರಂಭ ಆಗಲಿದೆ. ಸಾಕ್ಷ್ಯ ವಿಚಾರಣೆಗೆ ಪೂರ್ವ ಸಿದ್ಧತೆ ಆರಂಭಿಸಿರುವ ಪ್ರಾಸಿಕ್ಯೂಷನ್ ಇಂದು (ಡಿ.16) ಘಟನೆಯ ಸ್ಥಳ ಪರಿಶೀಲನೆ ನಡೆಸಿದೆ. ಮೊದಲ ಸಾಕ್ಷಿಗಳಾಗಿ ರೇಣುಕಾಸ್ವಾಮಿ (Renukaswamy) ತಂದೆ, ತಾಯಿಗೆ ಸಮನ್ಸ್ ಜಾರಿಯಾಗಿದೆ. ಬುಧವಾರ ವಿಚಾರಣೆ ನಡೆಯಲಿದೆ. ಟ್ರಯಲ್ಗೆ ಸಿದ್ಧತೆ ನಡೆದಿದೆ.
ಸಾಕ್ಷ್ಯ ವಿಚಾರಣೆಗೂ ಮುನ್ನ ಕೊಲೆಯ ಸ್ಥಳ ಪರಿಶೀಲನೆಗೆ ಮುಂದಾಗಿರುವ ಎಸ್ಪಿಪಿ ಪ್ರಸನ್ನ ಕುಮಾರ್, ಸಹಾಯಕ ಎಸ್ಪಿಪಿ ಸಚಿನ್, ತನಿಖಾಧಿಕಾರಿ ಎಸಿಪಿ ಚಂದನ್ ಜೊತೆಗೂಡಿ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಅಪಹರಿಸಿ ತಂದಿಟ್ಟಿದ್ದ ಶೆಡ್, ಹಲ್ಲೆ ನಡೆಸಿದ ಸ್ಥಳ, ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಂಡ ಸ್ಥಳ, ಕೊಲೆಯಾದ ನಂತರ ಶವ ಇಟ್ಟಿದ್ದ ಸ್ಥಳ, ನಂತರ ರಾತ್ರಿ ಶವ ಬಿಸಾಡಿದ ಸತ್ವ ಅಪಾರ್ಟ್ಮೆಂಟ್ ಬಳಿಯ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಡಿ.17ಕ್ಕೆ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಮೊದಲಿಗೆ ಚಾರ್ಜ್ ಷೀಟ್ನಲ್ಲಿ 7 ಮತ್ತು 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಹೇಗಿರಲಿದೆ ದರ್ಶನ್ ಟ್ರಯಲ್?
ಬುಧವಾರ ಕೋರ್ಟ್ನಲ್ಲಿ ರೇಣುಕಾಸ್ವಾಮಿ ತಂದೆ ತಾಯಿ ಸಾಕ್ಷ್ಯ ವಿಚಾರಣೆ ಆಗಲಿದೆ. ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ ಬಗ್ಗೆ ವಿಚಾರಣೆ ಆಗಲಿದೆ. ಅಪಹರಣ, ಶವ ಪತ್ತೆ ಬಗ್ಗೆ ತಂದೆ ತಾಯಿ ವಿವರಿಸಲಿದ್ದಾರೆ. ಸಾಕ್ಷಿಗಳ ಪಾಟೀಸವಾಲಿಗೆ ಆರೋಪಿಗಳ ಪರ ವಕೀಲರು ಸಮಯ ಕೋರಲಿದ್ದಾರೆ. ಇಬ್ಬರ ಹೇಳಿಕೆ ಮುಕ್ತಾಯವಾದರೆ ಮತ್ತೆ ಕೆಲವು ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುವುದು.
ಇದನ್ನೂ ಓದಿ: ‘ಧುರಂಧರ್’ ಎದುರು ಮಂಕಾದ ‘ದಿ ಡೆವಿಲ್’: ದರ್ಶನ್ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದ್ದು ಯಾಕೆ?
272 ಸಾಕ್ಷಿಗಳಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಎಸ್ಪಿಪಿ ನಡೆಸಲಿದ್ದಾರೆ. ಆರೋಪಿಗಳ ಪರ ವಕೀಲರು ಎಲ್ಲ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ನಂತರ ಸಾಕ್ಷ್ಯದ ಬಗ್ಗೆ ಆರೋಪಿಗಳ ಹೇಳಿಕೆ ದಾಖಲು ಮಾಡಲಾಗುವುದು. ತಮ್ಮ ಸಾಕ್ಷ್ಯ ಒದಗಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ ವಾದಮಂಡನೆ ಆಲಿಸಿ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದು ವರ್ಷ ಬೇಕಾಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.