25 ವರ್ಷಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ಎಂದಿಗೂ ಆ ಮಾತು ಹೇಳಿಲ್ಲ; ವಿಜಯಲಕ್ಷ್ಮೀ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ವಿಜಯಲಕ್ಷ್ಮಿ ಅವರು ಈ ಕುರಿತು ಸಂದರ್ಶನ ನೀಡಿದ್ದು, ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಕಂಡು ಖುಷಿಯಾಗಿದ್ದಾರೆ. ದರ್ಶನ್ ಜೈಲಿನಿಂದಲೇ ಕರೆ ಮಾಡಿ ಸಿನಿಮಾದ ಪ್ರತಿಕ್ರಿಯೆ ತಿಳಿದುಕೊಂಡಿದ್ದಾರೆ. ಅಭಿಮಾನಿಗಳು ಸ್ವಂತ ಹಣದಿಂದ ಕಟೌಟ್‌ಗಳನ್ನು ಹಾಕಿ ದರ್ಶನ್‌ಗೆ ಅನನ್ಯ ಪ್ರೀತಿ ತೋರಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಈ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ‘ಮಿಲನ’ ರೀತಿಯ ಸಿನಿಮಾಗಳನ್ನು ನೀಡಿದ್ದರು. ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ಅವರದ್ದು ದ್ವಿಪಾತ್ರ. ಈಗ ಸಿನಿಮಾ ಪ್ರಚಾರದ ಭಾಗವಾಗಿ ವಿಜಯಲಕ್ಷ್ಮೀ ಅವರು ಸಂದರ್ಶನ ಒಂದನ್ನು ನೀಡಿದ್ದಾರೆ. ಈ ಸಂದರ್ಶನ ಡಿ ಕಂಪನಿ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಕಂಡಿದೆ. ಈ ಸಂದರ್ಶನ ಮಾಡಿದ್ದು ಡೆವಿಲ್ ನಾಯಕಿ ರಚನಾ ರೈ ಎಂಬುದು ವಿಶೇಷ.
ವಿಜಯಲಕ್ಷ್ಮೀ ಅವರು ‘ಡೆವಿಲ್’ ಸಿನಿಮಾಗೆ ಮೊದಲ ದಿನ ಮೊದಲ ಶೋ ಹೋಗಿದ್ದರು. ಬೆಂಗಳೂರಿನ ಗಾಂಧಿ ನಗರದಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ತೆರಳಿ ಅವರು ಸಿನಿಮಾ ವೀಕ್ಷಣೆ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಸಂಭ್ರಮ ನೋಡಿ ಅವರಿಗೆ ಖುಷಿ ಆಗಿದೆ. ಈ ವಿಷಯವನ್ನು ದರ್ಶನ್ ಅವರಿಗೆ ತಿಳಿಸೋ ಕೆಲಸವನ್ನು ಅವರು ಮಾಡಿದ್ದಾರೆ.
ವಾರದಲ್ಲಿ ಎರಡು ದಿನ ಜೈಲಿನ ಲ್ಯಾಂಡ್ಲೈನ್ ಮೂಲಕ ಫೋನ್ ಮಾಡುವ ಅವಕಾಶ ಇರುತ್ತದೆ ಮತ್ತು ದರ್ಶನ್ ಅವರು ಡೆವಿಲ್ ರಿಲೀಸ್ ಆದಾಗ ಕರೆ ಮಾಡಿ ಸಿನಿಮಾಗೆ ಸಿಕ್ಕ ವಿಮರ್ಶೆಯನ್ನು ತಿಳಿದುಕೊಂಡಿದ್ದರು. ಸಿನಿಮಾ ಹೇಗಿದೆ ಎಂಬುದನ್ನು ವಿಜಯಲಕ್ಷ್ಮೀ ಅವರು ವಿವರಿಸಿದ್ದರು. ಈ ವೇಳೆ ವಿಜಯಲಕ್ಷ್ಮೀ ಅವರು ಒಂದು ವಿಷಯ ಹೇಳಿದ್ದಾರೆ.
ಇದನ್ನೂ ಓದಿ: ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
ನಾನಾ ಜಿಲ್ಲೆಗಳಲ್ಲಿ ‘ಡೆವಿಲ್’ನ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ಇದೆಲ್ಲವೂ ಅಭಿಮಾನಿ ಸಂಘದವರು ತಮ್ಮದೇ ಸ್ವಂತ ಹಣದಲ್ಲಿ ಮಾಡಿರೋದು. ಇದನ್ನು ಮಾಡುವಂತೆ ದರ್ಶನ್ ಆಗಲಿ, ವಿಜಯಲಕ್ಷ್ಮೀ ಆಗಲಿ ಯಾವಾಗಲೂ ಹೇಳಿಲ್ಲವಂತೆ. ‘25 ವರ್ಷಗಳಲ್ಲಿ ದರ್ಶನ್ ಈ ಮಾತನ್ನು ಯಾವ ಅಭಿಮಾನಿಗೂ ಹೇಳಿಲ್ಲ’ ಎಂದು ವಿಜಯಲಕ್ಷ್ಮೀ ಅವರು ವಿವರಿಸಿದರು. ಈ ಮೂಲಕ ಅಭಿಮಾನಿಗಳು ದರ್ಶನ್ ಹೇಳದೇ ಇದ್ದರೂ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ಖುಷಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Tue, 16 December 25



