Laughing Buddha: ಕಾಂತಾರ 2 ನಿರ್ದೇಶಕ್ಕೆ ಮುನ್ನ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ

|

Updated on: Mar 12, 2023 | 9:47 PM

ಕಾಂತಾರ 2 ಸಿನಿಮಾದ ಪ್ರೀ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.

Laughing Buddha: ಕಾಂತಾರ 2 ನಿರ್ದೇಶಕ್ಕೆ ಮುನ್ನ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Follow us on

ರಿಷಬ್ ಶೆಟ್ಟಿ (Rishab Shetty) ಉತ್ತಮ ನಟ ಹಾಗೂ ನಿರ್ದೇಶಕ ಆಗಿರುವ ಜೊತೆಗೆ ಒಳ್ಳೆಯ ನಿರ್ಮಾಪಕರೂ ಹೌದು. ಈಗಾಗಲೇ ಐದು ಸಿನಿಮಾವನ್ನು ರಿಷಬ್ ನಿರ್ಮಾಣ ಮಾಡಿದ್ದಾರೆ. ತಮ್ಮದೇ ನಿರ್ದೇಶನದ ‘ಸಹಿಪ್ರಾ ಶಾಲೆ ಕಾಸರಗೋಡು’ ಹೊರತುಪಡಿಸಿ ಇನ್ನೆಲ್ಲ ಹೊಸಬರ ವಿಭಿನ್ನವಾದ ಕತೆಗಳ ಮೇಲೆ ರಿಷಬ್ ಬಂಡವಾಳ ಹೂಡಿದ್ದಾರೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಯಶಸ್ವಿಯಾಗಿರುವ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದು ಸಿನಿಮಾ ಇಂದು ಚಿತ್ರೀಕರಣ ಪ್ರಾರಂಭಿಸಿದೆ.

ರಿಷಬ್ ಶೆಟ್ಟಿ ಫಿಲಮ್ಸ್ ಬ್ಯಾನರ್​ ಅಡಿ ‘ಲಾಂಫಿಂಗ್ ಬುದ್ಧ’ ಹೆಸರಿನ ಸಿನಿಮಾ ನಿರ್ಮಾಣ ಮಾಡುವುದಾಗಿ ಮೂರು ವರ್ಷಗಳ ಹಿಂದೆಯೇ ಘೋಷಿಸಲಾಗಿ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಕೊರೊನಾ ಲಾಕ್​ಡೌನ್ ಆ ಬಳಿಕ ‘ಕಾಂತಾರ’ ಚಿತ್ರೀಕರಣ, ಯಶಸ್ಸಿನ ನಡುವೆ ಈ ಸಿನಿಮಾದ ಯೋಜನೆ ನೆನೆಗುದಿಯಲ್ಲಿತ್ತು. ಇದೀಗ ಕೊನೆಗೂ ಆ ಯೋಜನೆಗೆ ಮುಕ್ತಿ ದೊರೆತಿದ್ದು ಸಿನಿಮಾದ ಮುಹೂರ್ತ ನಡೆದು ಚಿತ್ರೀಕರಣ ಆರಂಭಗೊಂಡಿದೆ.

“ಲಾಫಿಂಗ್ ಬುದ್ದ” ಚಿತ್ರ ಇಂದು ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಆರಂಭವಾಯಿತು.
ಎಂ.ಭರತ್ ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಿದ್ದಾರೆ. ವಿಷ್ಣುವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಭದ್ರಾವತಿಯಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಡೊಳ್ಳು ಹೊಟ್ಟೆಯ ಪೊಲೀಸ್ ಕಾನ್ಸ್​ಟೇಬಲ್ ಪಾತ್ರದಲ್ಲಿ ನಟಿಸಲಿದ್ದಾರೆ.

ನಿರ್ದೇಶಕ ಭರತ್​ಗೆ ಇದು ಮೊದಲನೇ ಸಿನಿಮಾ. ಪ್ರಮೋದ್ ಶೆಟ್ಟಿ ಅವರಿಗಾಗಿಯೇ ಈ ಸಿನಿಮಾವನ್ನು ಬರೆದಿರುವುದಾಗಿ ಭರತ್ ಹೇಳಿಕೊಂಡಿದ್ದಾರೆ. ದೇಹ ತೂಕ ಹೆಚ್ಚಿಗಿರುವ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬನ ಜೀವನದಲ್ಲಿ ನಡೆಯುವ ಕಥೆ ಮತ್ತು ಅದರ ತಿರುವುಗಳನ್ನು ಕತೆ ಒಳಗೊಂಡಿರಲಿದೆ. ಹಾಸ್ಯದ ಜತೆಗೆ ಭಾವನಾತ್ಮಕ ದೃಶ್ಯಗಳು ಸಹ ಸಿನಿಮಾದಲ್ಲಿ ಇರಲಿವೆ ಎಂದಿದ್ದಾರೆ.

ರಿಷಬ್ ಶೆಟ್ಟಿ ಈಗಾಗಲೇ ಐದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಹಿಪ್ರಾ ಶಾಲೆ ಕಾಸರಗೋಡು, ಲಾಕ್​ಡೌನ್​ನಲ್ಲಿ ನಿರ್ಮಿಸಿದ ಹೀರೋ, ಅಂಥಾಲಜಿ ಸಿನಿಮಾ ಕಥಾಸಂಗಮ, ನಟೇಶ್ ಹೆಗಡೆ ನಿರ್ಮಾಣದ ಕಲಾತ್ಮಕ ಸಿನಿಮಾ ಪೆದ್ರೊ, ಶಿವಮ್ಮ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಲಾಫಿಂಗ್ ಬುದ್ಧ ಸಿನಿಮಾ ಮೇಲೆ ಬಂಡವಾಳ ತೊಡಗಿಸಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ತಯಾರಿಯಲ್ಲಿ ನಿರತರಾಗಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸನ್ನು ಪೂರ್ಣವಾಗಿ ಎಂಜಾಯ್ ಮಾಡಿರುವ ರಿಷಬ್ ಶೆಟ್ಟಿ ಇದೀಗ ಕಾಂತಾರ 2 ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮಳೆಗಾಲಕ್ಕೆ ಸಿನಿಮಾದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ