ರಿಷಬ್ ಶೆಟ್ಟಿ ನಿರ್ದೇಶಕನಾಗಿ, ನಟನಾಗಿ ಹಾಗೂ ನಿರ್ಮಾಪಕನಾಗಿ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜತೆಗೆ ಅವರು ಸಾಮಾಜಿಕ ಚಿಂತನೆಗಳನ್ನು ಕೂಡ ಮಾಡುತ್ತಾರೆ. ಈ ಬಗ್ಗೆ ಆಗೊಂದು ಈಗೊಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕುತ್ತಿರುತ್ತಾರೆ. ಈಗ ಕನ್ನಡ ರಾಜ್ಯೋತ್ಸವದ ಬಗ್ಗೆ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಇದಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ರಾಜ್ಯದ ಬಹುತೇಕ ಕಡೆಗಳಲ್ಲಿ ಇದನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ, ಕೊವಿಡ್ ಇನ್ನೂ ಪೂರ್ತಿಯಾಗಿ ತೊಲಗದ ಕಾರಣ ಕೆಲ ನಿಯಮಗಳು ಜಾರಿಯಲ್ಲಿವೆ. ಮೈಸೂರು ದಸರಾ ಆಚರಣೆಗೆ ಆರಂಭದಲ್ಲಿ ಕೆಲ ನಿರ್ಬಂಧಗಳನ್ನು ಹೇರಲು ಸರ್ಕಾರ ಮುಂದಾಗಿತ್ತು. ಆದರೆ, ವಿರೋಧದ ನಂತರ ಇದನ್ನು ಸಡಿಲ ಮಾಡಲಾಗಿತ್ತು. ಆದರೆ, ರಾಜಕೀಯ ಸಮಾವೇಶ ಬಂದಾಗ ಈ ಯಾವ ನಿಯಮಗಳೂ ಅನ್ವಯ ಆಗುವುದಿಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ರ್ಯಾಲಿ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಈ ವಿಚಾರ ಇಟ್ಟುಕೊಂಡು ರಿಷಬ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ ? @CMofKarnataka
— Rishab Shetty (@shetty_rishab) October 21, 2021
‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ’ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಇದನ್ನು ನೂರಾರು ಜನರು ರೀಟ್ವಿಟ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ‘ಗರುಡ ಗಮನ ವೃಷಭ ವಾಹನ’ ಚಿತ್ರ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿತ್ತು. ‘ಒಂದು ಮೊಟ್ಟೆಯ ಕಥೆ’ ಬಳಿಕ ರಾಜ್ ಬಿ. ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಬೇರೊಂದು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯ ನಿರೀಕ್ಷೆ ಡಬಲ್ ಆಗಿದೆ. ನವೆಂಬರ್ 19ರಂದು ಚಿತ್ರಮಂದಿರಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದತ್ತ ಹೊರಟ ಕನ್ನಡದ ‘ಪೆಡ್ರೋ’; ಸಂತಸ ಹಂಚಿಕೊಡ ರಿಷಬ್ ಶೆಟ್ಟಿ
GGVV Trailer: ರಾಜ್ ಬಿ ಶೆಟ್ಟಿ ಇನ್ನೊಂದು ಮುಖ ಅನಾವರಣ; ಸಾಥ್ ನೀಡಿದ ರಿಷಬ್ ಶೆಟ್ಟಿ
Published On - 5:00 pm, Thu, 21 October 21