
‘ಕಾಂತಾರ’ (Kantara) ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾದಿಂದ ರಿಷಬ್ ಶೆಟ್ಟಿಯ ಬದುಕೇ ಬದಲಾಗಿದೆ. ‘ಕಾಂತಾರ’ ಸಿನಿಮಾದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆಕಿದ್ದು ಮಾತ್ರವೇ ಅಲ್ಲದೆ ಇಂದು ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ ಈ ಸಿನಿಮಾ. ಆದರೆ ಇತ್ತೀಚೆಗೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ, ತಮಗೆ ‘ಕಾಂತಾರ’ ಸಿನಿಮಾನಲ್ಲಿ ನಟಿಸುವ ಆಸೆಯೇ ಇರಲಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ ಅವರು ಐಎನ್ಸಿಎ 2026 ಅವಾರ್ಡ್ ದೊರಕಿತು. ‘ಕಾಂತಾರ 1’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಬಾಚಿಕೊಂಡಿತು. ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ರಿಷಬ್ ಶೆಟ್ಟಿ ತಮಗೆ ‘ಕಾಂತಾರ’ ಸಿನಿಮಾನಲ್ಲಿ ನಟಿಸುವ ಆಲೋಚನೆಯೇ ಇರಲಿಲ್ಲ ಎಂದಿದ್ದಾರೆ. ಅದು ಏಕೆಂದು ಸಹ ವಿವರಿಸಿದ್ದಾರೆ.
ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವಾಗ ಪತ್ನಿ ಪ್ರಗತಿ ಶೆಟ್ಟಿ ಅವರನ್ನೂ ವೇದಿಕೆಗೆ ಕರೆದ ರಿಷಬ್ ಶೆಟ್ಟಿ, ‘ನಾನು ‘ಕಾಂತಾರ’ ಸಿನಿಮಾ ಬರೆದಾಗ ನನಗೆ ಬಹಳ ಖುಷಿ ಆಗಿತ್ತು. ಕತೆ ಚೆನ್ನಾಗಿ ಮೂಡಿ ಬಂದಿತ್ತು. ನಾನು ಸಿನಿಮಾಗಳಲ್ಲಿ ಅದಕ್ಕೂ ಮುಂಚೆ ನಟಿಸಿದ್ದೆ ಆದರೆ ನಾನು ನಿರ್ದೇಶಿಸಿದ ಸಿನಿಮಾನಲ್ಲಿ ನಟಿಸುತ್ತಿರಲಿಲ್ಲ ಅಥವಾ ಸಣ್ಣ ಪಾತ್ರದಲ್ಲಿ ಮಾತ್ರ ನಟಿಸುತ್ತಿದ್ದೆ. ಹೇಗೋ ಕತೆ ಚೆನ್ನಾಗಿ ಮೂಡಿ ಬಂದಿದೆ, ನಾನು ಆರಾಮವಾಗಿ ನಿರ್ದೇಶನ ಮಾತ್ರ ಮಾಡೋಣ ಎಂದುಕೊಂಡಿದ್ದೆ, ‘ಕಾಂತಾರ’ ಸಿನಿಮಾನಲ್ಲಿ ನಟಿಸುವ ಆಸೆ ನನಗೆ ಇರಲಿಲ್ಲ’ ಎಂದಿದ್ದಾರೆ ರಿಷಬ್.
ಇದನ್ನೂ ಓದಿ:ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಶೆಟ್ಟಿ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್
‘ಆದರೆ ಪ್ರಗತಿ ಶೆಟ್ಟಿ, ‘‘ಇಲ್ಲ ಶಿವ ಪಾತ್ರ ನಿಮಗೆ ಚೆನ್ನಾಗಿ ಒಪ್ಪುತ್ತದೆ ನೀವು ಆ ಪಾತ್ರದಲ್ಲಿ ನಟಿಸಲೇ ಬೇಕು ಎಂದರು. ನನಗೆ ಧೈರ್ಯ ನೀಡಿ, ಆ ಪಾತ್ರ ಮಾಡಲು ನನ್ನಲ್ಲಿ ಸ್ಪೂರ್ತಿ ತುಂಬಿದರು. ಅದರಿಂದಲೇ ನಾನು ಕಾಂತಾರ’ ಸಿನಿಮಾನಲ್ಲಿ ನಟಿಸಿದೆ’ ಎಂದಿದ್ದಾರೆ ರಿಷಬ್. ಆ ನಂತರ ‘ಕಾಂತಾರ 1’ನಲ್ಲಿಯೂ ಅದನ್ನೇ ಮುಂದುವರೆಸಿದೆ’ ಎಂದಿದ್ದಾರೆ ರಿಷಬ್.
‘ಕಾಂತಾರ ಮತ್ತು ಕಾಂತಾರ 1’ ಸಿನಿಮಾದ ಹಿಂದೆ ಸಾಕಷ್ಟು ಜನರ ಶ್ರಮ ಇದೆ. ಆ ಸಿನಿಮಾದಿಂದಾಗಿ ಈ ನಮ್ಮ ಊರು ‘ಫಿಲಂ ವಿಲೇಜ್’ ಆಗಿಬಿಟ್ಟಿದೆ. ಇಲ್ಲೆಲ್ಲ ಫಿಲಂ ಸಿಟಿಗಳು ಸಿಕ್ಕರೆ ನಮ್ಮದು ‘ಫಿಲಂ ವಿಲೇಜ್’ ಆಗಿಬಿಟ್ಟಿದೆ. ಪ್ರತಿದಿನ ಮೂರು-ನಾಲ್ಕು ಸಿನಿಮಾ ಶೂಟಿಂಗ್ ನಮ್ಮ ಊರಿನ ಸುತ್ತ-ಮುತ್ತ ಇರುತ್ತದೆ. ಈ ಸಿನಿಮಾದ ಯಶಸ್ಸು ಎಲ್ಲ ಕನ್ನಡಿಗರಿಗೆ ಸಲ್ಲಬೇಕು. ಅವರ ಪ್ರೀತಿ, ಆಶೀರ್ವಾದ ಇಲ್ಲದೇ ಹೋಗಿದ್ದರೆ ಕಾಂತಾರ ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದಿದ್ದಾರೆ ರಿಷಬ್ ಶೆಟ್ಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ