3ನೇ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರದ ಕಲೆಕ್ಷನ್; ಒಟ್ಟು ಎಷ್ಟಾಯ್ತು?

7 ಭಾಷೆಗಳಲ್ಲಿ ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. 3 ದಿನಕ್ಕೆ ಈ ಸಿನಿಮಾದ ಕಲೆಕ್ಷನ್ 163 ಕೋಟಿ ರೂಪಾಯಿಗೂ ಅಧಿಕ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. 4ನೇ ದಿನವಾದ ಭಾನುವಾರ (ಅಕ್ಟೋಬರ್ 5) ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

3ನೇ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರದ ಕಲೆಕ್ಷನ್; ಒಟ್ಟು ಎಷ್ಟಾಯ್ತು?
Kantara Chapter 1

Updated on: Oct 05, 2025 | 7:33 AM

ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾಗೆ ಜನರು ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ. ಮೊದಲ ಮೂರು ದಿನವೂ ಎಲ್ಲ ಚಿತ್ರಮಂದಿಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಭಾನುವಾರ (ಅಕ್ಟೋಬರ್ 5) ಕೂಡ ಅದೇ ಪರಿಸ್ಥಿತಿ ಮುಂದುವರಿದಿದೆ. ಈವರೆಗೂ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ (Kantara Chapter 1 Collection) 163 ಕೋಟಿ ರೂಪಾಯಿ ಮೀರಿದೆ. ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೂಡ ಉತ್ತಮ ಕಲೆಕ್ಷನ್ ಆಗಲಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟ್ಟು 7 ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅಕ್ಟೋಬರ್ 1ರ ಸಂಜೆ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ನಡೆಯಿತು. ಅಕ್ಟೋಬರ್ 2ರಂದು ಗ್ರ್ಯಾಂಡ್ ಆಗಿ ಹಲವು ಸಾವಿರಾರು ಪರದೆಗಳಲ್ಲಿ ಬಿಡುಗಡೆ ಆಯಿತು. ಮೊದಲ ದಿನವೇ ಈ ಸಿನಿಮಾ 61.85 ಕೋಟಿ ರೂಪಾಯಿ ಬಾಚಿಕೊಂಡಿತು. 2ನೇ ದಿನವಾದ ಶುಕ್ರವಾರ (ಅಕ್ಟೋಬರ್ 3) 46 ಕೋಟಿ ರೂಪಾಯಿ ಗಳಿಸಿತು.

ಮೂರನೇ ದಿನವಾದ ಶನಿವಾರ (ಅಕ್ಟೋಬರ್ 4) ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ ಏರಿಕೆ ಆಯಿತು. sacnilk ವರದಿ ಪ್ರಕಾರ ಅಂದಾಜು 55.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲಗೆ, 3 ದಿನಕ್ಕೆ ಈ ಸಿನಿಮಾಗೆ 163.1 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾನುವಾರದ ಗಳಿಕೆ ಕೂಡ ಸೇರಿದರೆ ಅನಾಯಾಸವಾಗಿ 200 ಕೋಟಿ ರೂಪಾಯಿ ದಾಟಲಿದೆ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಅದಕ್ಕೆ ತಕ್ಕಂತೆ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ರಿಷಬ್ ಶೆಟ್ಟಿ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ರಿಷಬ್ ನಟನೆಯ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಜನರಿಂದ ಉತ್ತಮ ಮಾತುಗಳು ಕೇಳಿಬರುತ್ತಿವೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಇದು ಸಹಕಾರಿ ಆಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಗುಲ್ಶನ್ ದೇವಯ್ಯ, ಪ್ರಕಾಶ್ ತುಮಿನಾಡು, ಜಯರಾಮ್, ರಾಕೇಶ್ ಪೂಜಾರಿ ಮುಂತಾದವರು ನಟಿಸಿದ್ದಾರೆ. ಸಿನಿಮಾದ ಹಿಂದಿ ವರ್ಷನ್ ಕೂಡ ಉತ್ತಮ ಕಮಾಯಿ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.