ಆನೆಗುಡ್ಡೆ ವಿನಾಯಕನ ಮಹಿಮೆ; ಈ ದೇವರಿಂದ ರಿಷಬ್​ ಶೆಟ್ಟಿ, ಪ್ರಗತಿ ಶೆಟ್ಟಿ ಬದುಕಲ್ಲಿ ಏನೆಲ್ಲ ಆಯ್ತು ಗೊತ್ತಾ?

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಕಾಂತಾರ: ಚಾಪ್ಟರ್​ 1’ ಸಿನಿಮಾಗೆ ಸ್ಕ್ರಿಪ್ಟ್​ ಪೂಜೆ ಮತ್ತು ಮುಹೂರ್ತ ಮಾಡಲಾಗಿದೆ. ಈ ಸಂದರ್ಭದಲ್ಲಿ ರಿಷಬ್​ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಭಾಗಿ ಆಗಿದ್ದರು. ಈ ದೇವಸ್ಥಾನದ ಬಗ್ಗೆ ಅವರಿಗೆ ಅಪಾರವಾದ ನಂಬಿಕೆ ಇದೆ.

ಆನೆಗುಡ್ಡೆ ವಿನಾಯಕನ ಮಹಿಮೆ; ಈ ದೇವರಿಂದ ರಿಷಬ್​ ಶೆಟ್ಟಿ, ಪ್ರಗತಿ ಶೆಟ್ಟಿ ಬದುಕಲ್ಲಿ ಏನೆಲ್ಲ ಆಯ್ತು ಗೊತ್ತಾ?
ಪ್ರಗತಿ ಶೆಟ್ಟಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
Follow us
ಮದನ್​ ಕುಮಾರ್​
|

Updated on:Nov 27, 2023 | 6:48 PM

ನಟ ರಿಷಬ್​ ಶೆಟ್ಟಿ (Rishab Shetty) ಅವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರಿಗೆ ಖ್ಯಾತಿ ಹೆಚ್ಚಾಗಿದೆ. ‘ಕಾಂತಾರ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಅಭಿಮಾನಿ ಬಳಗ ಹಿರಿದಾಯಿತು. ಪರಭಾಷೆಗಳಿಂದಲೂ ಅವರಿಗೆ ಆಫರ್​ ಬರಲು ಆರಂಭವಾಯಿತು. ಸಿನಿಮಾ ಮಾತ್ರವಲ್ಲದೇ ಅವರ ವೈಯಕ್ತಿಕ ಜೀವನದಲ್ಲೂ ಒಳ್ಳೆಯದೇ ಆಗಿದೆ. ಈ ಎಲ್ಲ ಅಭಿವೃದ್ಧಿಗೆ ಅವರ ಪರಿಶ್ರಮದ ಜೊತೆಗೆ ದೇವರ ಆಶೀರ್ವಾದ ಕೂಡ ಇದೆ. ಈ ಬಗ್ಗೆ ರಿಷಬ್​ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಮಾತನಾಡಿದ್ದಾರೆ. ಇಂದು (ನ.27) ‘ಕಾಂತಾರ: ಚಾಪ್ಟರ್​ 1’ ಸಿನಿಮಾದ ಮುಹೂರ್ತ ನೆರವೇರಿದೆ. ಕುಂದಾಪುರದ ಆನೆಗುಡ್ಡ ಶ್ರೀ ವಿನಾಯಕ ದೇವಸ್ಥಾನದಲ್ಲಿ (Anegudde Sri Vinayaka Temple) ನಡೆದ ಮುಹೂರ್ತ ಸಮಾರಂಭದಲ್ಲಿ ಪ್ರಗತಿ ಶೆಟ್ಟಿ ಕೂಡ ಭಾಗವಹಿಸಿದ್ದರು. ಆ ವೇಳೆ ಅವರು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಬಗ್ಗೆ ತಮಗೆ ಇರುವ ನಂಬಿಕೆ ಏನು ಎಂಬುದನ್ನು ತಿಳಿಸಿದರು.

‘ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಎಂದರೆ ಒಂದು ವಿಶೇಷವಾದ ನಂಬಿಕೆ ಇದೆ. ನಮ್ಮ ಜೀವನದಲ್ಲಿ ಏನೇ ಒಳ್ಳೆಯದು ಆಗಿದ್ದರೂ ಅದನ್ನು ಇಲ್ಲಿಂದಲೇ ಶುರು ಮಾಡಿರುವುದು. ರಿಷಬ್​ ಶೆಟ್ಟಿ ಅವರು ನನ್ನನ್ನು ಮೊದಲ ಬಾರಿ ಇಲ್ಲಿಯೇ ನೋಡಿದ್ದು. ಆನಂತರ ‘ಕಾಂತಾರ’ ಸಿನಿಮಾದ ಮುಹೂರ್ತ ಕೂಡ ಇಲ್ಲಿಯೇ ಮಾಡಿದ್ದೆವು. ಈ ದೇವರ ದಯೆಯಿಂದ ಆ ಸಿನಿಮಾ ತುಂಬ ಚೆನ್ನಾಗಿ ಆಯಿತು ಎಂಬುದು ನಿಮಗೆಲ್ಲರಿಗೂ ಗೊತ್ತು. ಅದೇ ನಂಬಿಕೆಯಿಂದ ಇಂದು ಕೂಡ ಪೂಜೆ ಮಾಡಿಸಿ, ‘ಕಾಂತಾರ: ಚಾಪ್ಟರ್​ 1’ ಸಿನಿಮಾದ ಮುಹೂರ್ತ ಮಾಡಿದ್ದೇವೆ’ ಎಂದು ಪ್ರಗತಿ ಶೆಟ್ಟಿ ಹೇಳಿದ್ದಾರೆ.

‘ದೈವ, ದೇವರು ಮತ್ತು ಜನರ ಆಶೀರ್ವಾದದಿಂದ ಈ ಬಾರಿ ಕೂಡ ಯಾವುದೇ ವಿಘ್ನಗಳು ಇಲ್ಲದೇ ಸಿನಿಮಾ ತುಂಬ ಚೆನ್ನಾಗಿ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ‘ಕಾಂತಾರ: ಚಾಪ್ಟರ್​ 1’ ವಿಚಾರದಲ್ಲಿ ಒತ್ತಡ ಏನೂ ಇಲ್ಲ. ಜನರ ಕೊಟ್ಟಿರುವ ಪ್ರೀತಿ ಮತ್ತು ನಂಬಿಕೆಯನ್ನು ನಾವು ಉಳಿಸಿಕೊಂಡು ಹೋಗಬೇಕು’ ಎಂದಿದ್ದಾರೆ ಪ್ರಗತಿ ಶೆಟ್ಟಿ. ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೂಲಕ ವಿಜಯ್​ ಕಿರಗಂದೂರು ಅವರು ನಿರ್ಮಾಣ ಮಾಡುತ್ತಿದ್ದಾರೆ. ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: Kantara Chapter 1: ‘ಕಾಂತಾರ ಚಾಪ್ಟರ್​ 1’ ಚಿತ್ರದಲ್ಲಿ ರಿಷಬ್​ ಪತ್ನಿಗೆ ಪಾತ್ರ ಇದೆಯಾ? ಮುಹೂರ್ತದ ದಿನ ಪ್ರಗತಿ ಶೆಟ್ಟಿ ಹೇಳಿದ್ದಿಷ್ಟು..

ರಿಷಬ್​ ಶೆಟ್ಟಿ ಅವರನ್ನು ಮದುವೆ ಆದ ಬಳಿಕ ಪ್ರಗತಿ ಶೆಟ್ಟಿ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆದರು. ಕಾಸ್ಟ್ಯೂಮ್​ ಡಿಸೈನರ್ ಆಗಿ ಅವರು ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾಗೆ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿ ಆಗಿದ್ದರು ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಕಾಂತಾರ: ಚಾಪ್ಟರ್​ 1’ ಚಿತ್ರದಲ್ಲೂ ಅವರು ಕಾಸ್ಟ್ಯೂಮ್​ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪಾತ್ರ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಈಗಲೇ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ರಿಷಬ್​ ಅವರು ಮುಂದಿನ ದಿನಗಳಲ್ಲಿ ಏನಾದರೂ ತಿಳಿಸಿದರೆ ತಾವು ಪಾತ್ರ ಮಾಡಬಹುದು ಎಂದು ಪ್ರಗತಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:44 pm, Mon, 27 November 23