ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯಿಂದ ಮೂಡಿಬರಲಿರುವ ಎಲ್ಲ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಸೃಷ್ಟಿ ಆಗಿದೆ. ಅದರಲ್ಲೂ ‘ಕಾಂತಾರ’ ಸಿನಿಮಾದ ಮುಂದುವರಿದ ಭಾಗ ಯಾವಾಗ ಬರಲಿದೆ ಎಂಬ ಪ್ರಶ್ನೆ ಎಲ್ಲರಿಂದಲೂ ಕೇಳಿಬರುತ್ತಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗೆ ‘ಕಾಂತಾರ’ ಸಿನಿಮಾದಿಂದ ಸಿಕ್ಕ ಜನಪ್ರಿಯತೆ ಬಹಳ ದೊಡ್ಡದು. ಆದಷ್ಟು ಬೇಗ ಅವರು ‘ಕಾಂತಾರ 2’ (Kantara 2) ಸಿನಿಮಾದ ಕೆಲಸ ಶುರುಮಾಡಲಿ ಎಂದು ಫ್ಯಾನ್ಸ್ ಕಾದಿದ್ದಾರೆ. ಹಾಗಾದರೆ ಈ ಚಿತ್ರದ ಶೂಟಿಂಗ್ ಯಾವಾಗ ಆರಂಭ ಆಗಲಿದೆ? ಅದಕ್ಕೀಗ ಉತ್ತರ ಸಿಕ್ಕಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿಜಯ್ ಕಿರಗಂದೂರು (Vijay Kiragandur) ಅವರು ‘ಡೆಡ್ಲೈನ್’ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. 2023ರ ಮಳೆಗಾಲದಲ್ಲಿ ‘ಕಾಂತಾರ 2’ ಶೂಟಿಂಗ್ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.
‘ರಿಷಬ್ ಶೆಟ್ಟಿ ಅವರು ಈಗ ಕಥೆ ಬರೆಯುತ್ತಿದ್ದಾರೆ. ತಮ್ಮ ತಂಡದ ಜೊತೆ ಅವರು ಕರಾವಳಿ ಕರ್ನಾಟಕದ ಕಾಡಿಗೆ ತೆರಳಿದ್ದು, ರಿಸರ್ಚ್ ನಡೆಸುತ್ತಿದ್ದಾರೆ’ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಅಚ್ಚರಿ ಎಂದರೆ, ಕಾಂತಾರ ಸಿನಿಮಾಗೆ ಸೀಕ್ವೆಲ್ ಬದಲು, ಪ್ರೀಕ್ವೆಲ್ ಮಾಡಲು ತಂಡ ನಿರ್ಧರಿಸಿದೆ. ಅಂದರೆ, ‘ಕಾಂತಾರ’ ಚಿತ್ರದ ಕಥೆ ಆರಂಭ ಆಗುವುದಕ್ಕೂ ಮುನ್ನ ಏನಾಗಿತ್ತು ಎಂಬುದು ‘ಕಾಂತಾರ 2’ ಸಿನಿಮಾದಲ್ಲಿ ಇರಲಿದೆ.
ಇದನ್ನೂ ಓದಿ: ದೈವದ ಹರಕೆ ತೀರಿಸಿದ ‘ಕಾಂತಾರ’ ತಂಡ; ರೋಮಾಂಚನಕಾರಿಯಾಗಿದೆ ವಿಡಿಯೋ
‘ಜೂನ್ ತಿಂಗಳಲ್ಲಿ ಶೂಟಿಂಗ್ ಶುರು ಮಾಡಬೇಕು ಎಂದು ರಿಷಬ್ ಶೆಟ್ಟಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಯಾಕೆಂದರೆ, ಒಂದಷ್ಟು ದೃಶ್ಯಗಳಿಗೆ ಮಳೆಗಾಲದ ಅಗತ್ಯವಿದೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ನಮ್ಮದು’ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಇದನ್ನೂ ಓದಿ: Kantara 2: ‘ಕಾಂತಾರ 2 ಅಂತ ನೀವೇ ಎಲ್ಲ ಹೇಳ್ತಿದ್ದೀರಿ..’; ಸೀಕ್ವೆಲ್ ಬಗ್ಗೆ ಕೇಳಿದ್ದಕ್ಕೆ ರಿಷಬ್ ಶೆಟ್ಟಿ ಉತ್ತರ
ಸಾಧಾರಣ ಬಜೆಟ್ನಲ್ಲಿ ನಿರ್ಮಾಣವಾದ ‘ಕಾಂತಾರ’ ಸಿನಿಮಾ ವಿಶ್ವಾದ್ಯಂತ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆಯಿತು. ಈಗ ಈ ಚಿತ್ರದ 2ನೇ ಪಾರ್ಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಹಾಗಾಗಿ ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ನಿರ್ಧರಿಸಿದೆ.
ಇದನ್ನೂ ಓದಿ: Kamal Haasan: ‘ನಿಮ್ಮ ಮುಂದಿನ ಚಿತ್ರದಿಂದ ಕಾಂತಾರ ಸಿನಿಮಾ ದಾಖಲೆ ಮುರಿಯಿರಿ’; ರಿಷಬ್ ಶೆಟ್ಟಿಗೆ ಕಮಲ್ ಹಾಸನ್ ಸಲಹೆ
‘ಕಾಂತಾರ ಸಿನಿಮಾ ಅಷ್ಟು ದೊಡ್ಡ ಸಕ್ಸಸ್ ಆಗಿರೋದರಿಂದ ನಾವು ಏನೇ ಮಾಡಿದರೂ ದೊಡ್ಡದಾಗಿ ಮಾಡಬೇಕಿದೆ. ಪಾತ್ರವರ್ಗಕ್ಕೆ ಬೇರೆ ಕಲಾವಿದರು ಸೇರಲಿದ್ದಾರೆ. ಆದರೆ ಮೊದಲ ಚಿತ್ರದ ರೀತಿಯೇ ಇದರ ಶೈಲಿ ಇರಲಿದೆ’ ಎಂದು ವಿಜಯ್ ಕಿರಗಂದೂರು ಹೇಳಿರುವುದಾಗಿ ‘ಡೆಡ್ಲೈನ್’ ವರದಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Sat, 21 January 23