Mangli: ಬಳ್ಳಾರಿಯಲ್ಲಿ ಸಿಂಗರ್ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ; ಪೊಲೀಸರಿಂದ ಲಘು ಲಾಠಿ ಪ್ರಹಾರ
Singer Mangli | Bellary Festival: ಬಳ್ಳಾರಿ ಉತ್ಸವದಲ್ಲಿ ಭಾಗಿಯಾಗಲು ಗಾಯಕಿ ಮಂಗ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವಾಗ ಅವರನ್ನು ನೋಡಲು ಯುವಕರು ಮುಗಿಬಿದ್ದರು.
ಮೊದಲ ಬಾರಿಗೆ ನಡೆದ ಗಣಿ ನಾಡು ಬಳ್ಳಾರಿ ಉತ್ಸವ (Bellary Festival) ಅದ್ದೂರಿಯಾಗಿ ಜರುಗಿತು. ಎರಡು ದಿನಗಳ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ ನೀಡಿದರು. ಉತ್ಸವದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ಸವಕ್ಕೆ ಮೆರಗು ತಂದರು. ಮೊದಲ ದಿನದ ಉತ್ಸವದಲ್ಲಿ ಗಾಯಕಿಯರಾದ ಮಂಗ್ಲಿ (Singer Mangli) ಹಾಗೂ ಎಂಡಿ ಪಲ್ಲವಿ ಅವರ ಗಾಯನ ಪೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆ್ಯಂಕರ್ ಅನುಶ್ರೀ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದ ಮನರಂಜನಾ ಕಾರ್ಯಕ್ರಮಗಳಿಗೆ ಬಳ್ಳಾರಿ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಆದರೆ ಈ ವೇಳೆ ಕೆಲವರು ಕಲ್ಲು ತೂರಾಟ (Stone Pelting) ನಡೆಸಿದ್ದಾರೆ. ಗಾಯಕಿ ಮಂಗ್ಲಿ ಅವರ ಕಾರಿನ ಗಾಜು ಒಡೆಯಲಾಗಿದೆ.
ಜನವರಿ 21ರ ರಾತ್ರಿ ನಡೆದ ಘಟನೆ:
ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ (ಜ.21) ರಾತ್ರಿ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಂಗರ್ ಮಂಗ್ಲಿ ಬಂದಿದ್ದರು. ವೇದಿಕೆ ಮೇಲೆ ಹಾಡುಗಳನ್ನು ಹೇಳಿ ವಾಪಸ್ ತೆರಳುವಾಗ ಅವರನ್ನು ನೋಡಲು ಯುವಕರು ಮುಗಿಬಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಒಳಗೆ ಪುಂಡರು ನುಗ್ಗಿದರು. ಕೂಡಲೇ ಪೋಲಿಸರಿಂದ ಲಘು ಲಾಠಿ ಪ್ರಹಾರ ನಡೆಸಲಾಯಿತು. ಮಂಗ್ಲಿ ಹೋಗುತ್ತಿದ್ದ ಕಾರಿಗೆ ಕಲ್ಲು ಎಸೆಯಲಾಗಿದೆ.
ಕನ್ನಡದ ಸಿನಿಮಾಗೆ ಮಂಗ್ಲಿ ಹೀರೋಯಿನ್:
ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಅವರು ‘ಪಾದರಾಯ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ‘ಮಾಸ್ತಿಗುಡಿ’ ಖ್ಯಾತಿಯ ನಿರ್ದೇಶಕ ನಾಗಶೇಖರ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ನಾಗಶೇಖರ್ ಅವರು 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ ಅಂಜನಾದ್ರಿ ಬೆಟ್ಟದಲ್ಲಿ ವ್ರತ ಆಚರಿಸುತ್ತಿದ್ದಾರೆ. ಈ ಚಿತ್ರಕ್ಕೆ ಗಾಯಕಿ ಮಂಗ್ಲಿ ಅವರು ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ.
ಇದನ್ನೂ ಓದಿ: Mangli: ಮೈಸೂರಿಗೆ ಬಂದು ‘ಕನ್ನಡ ನನಗೆ ಎರಡನೇ ಮನೆ’ ಎಂದು ತೆಲುಗಿನಲ್ಲೇ ಹೇಳಿದ ಗಾಯಕಿ ಮಂಗ್ಲಿ
‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡ ತೆಲುಗಿನ ಗಾಯಕಿ ಮಂಗ್ಲಿ ಅವರು ನಂತರ ಕನ್ನಡದ ಅನೇಕ ಹಾಡುಗಳಿಗೆ ಧ್ವನಿ ನೀಡಿದರು. ಈಗ ಹೀರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಅವರು ಎಂಟ್ರಿ ನೀಡುತ್ತಿದ್ದಾರೆ. ಆ ಮೂಲಕ ಅವರ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ‘ಪಾದರಾಯ’ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ವಿಶೇಷ. ಈ ಚಿತ್ರದಲ್ಲಿ ಮಂಗ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Sun, 22 January 23