ರಾಕಿಂಗ್ ಸ್ಟಾರ್ ಯಶ್ (Yash) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಹೋದಲ್ಲಿ, ಬಂದಲ್ಲಿ ಜನರು ಮುತ್ತಿಕೊಳ್ಳುತ್ತಾ ಇದ್ದಾರೆ. ಇಷ್ಟು ಎತ್ತರಕ್ಕೆ ಬೆಳೆದರೂ ಅವರು ಮೊದಲು ಅವಕಾಶ ಕೊಟ್ಟ ನಿರ್ಮಾಪಕರನ್ನು ಎಂದಿಗೂ ಮರೆತಿಲ್ಲ. ‘ಮನದ ಕಡಲು’ ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಯಶ್ ಅವರು ಸಿನಿಮಾ ನಿರ್ಮಾಪಕರ ಬಗ್ಗೆ ಮಾತನಾಡಿದ್ದಾರೆ. ನನಗೆ ಮೊದಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
‘ಮನದ ಕಡಲು’ ಸಿನಿಮಾ ನಿರ್ದೇಶನ ಮಾಡಿದ್ದು ಯೋಗರಾಜ್ ಭಟ್. ಇದನ್ನು ನಿರ್ಮಾಣ ಮಾಡಿದ್ದು ಈ. ಕೃಷ್ಣಪ್ಪ ಅವರು. ಮುಂಗಾರು ಮಳೆಯನ್ನು ಇದೇ ಜೋಡಿ ಮಾಡಿತ್ತು. ಈ ಹಿಟ್ ಸಿನಿಮಾ ಕೊಟ್ಟ ಜೋಡಿ ಜೊತೆ ಯಶ್ಗೆ ಒಳ್ಳೆಯ ಒಡನಾಟ ಇದೆ. ಯಶ್ ಅವರು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ.
‘ಮೊಗ್ಗಿನ ಮನಸು’ ಸಿನಿಮಾಗೂ ಮೊದಲು ಯಶ್ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಆಗ ಅವರಿಗೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಎಲ್ಲರೂ ಆಫರ್ನೇನೋ ನೀಡುತ್ತಿದ್ದರು. ಆದರೆ, ಕಥೆ ಕೇಳಿದರೆ ‘ಅವಕಾಶ ಕೊಡುತ್ತಿರುವುದೇ ಹೆಚ್ಚು, ಕಥೆ ಬೇರೆ ಹೇಳಬೇಕಂತೆ. ಎಷ್ಟು ಧಿಮಾಕು’ ಎಂಬ ಮಾತನ್ನು ಯಶ್ ಅವರು ಕೇಳಬೇಕಾಯಿತು. ‘ನಾನು ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಿಲ್ಲದೆ ನನ್ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂಬುದು ಯಶ್ ಅವರ ಮಾತು. ಈ ಕಾರಣದಿಂದ ಕಥೆ ಕೇಳೇ ಕೇಳುತ್ತೇನೆ ಎಂದರು.
‘ಮೊಗ್ಗಿನ ಮನಸು’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಟಿಸಿದ್ದು ಯಶ್ಗೆ ಗೊತ್ತೇ ಇತ್ತು. ಆ ಸಮಯದಲ್ಲಿ ಅವರಿಗೆ ಯಶ್ ಆಲ್ ದಿ ಬೆಸ್ಟ್ ಹೇಳಿದ್ದರು. ‘ಇನ್ನೊಂದು ವಾರ ಮಾತ್ರ ಶೂಟ್ ಬಾಕಿ ಇದೆ’ ಎಂದು ರಾಧಿಕಾ ಪಂಡಿತ್ ಯಶ್ಗೆ ಹೇಳಿದ್ದರಂತೆ. ಹಾಗಿದ್ದಾಗಲೇ ನಿರ್ಮಾಣ ಸಂಸ್ಥೆ ಕಡೆಯಿಂದ ಯಶ್ ಅವರಿಗೆ ಕರೆ ಬಂತು. ನೀವು ಹೀರೋ ಆಗಿ ನಟಿಸಬೇಕು ಎಂದು ತಂಡ ಕೇಳಿಕೊಂಡಿತ್ತು.
ಇದನ್ನೂ ಓದಿ: ಅಭಿಮಾನಿಗಳಿಗೆ ಯಶ್ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?
‘ರಾಧಿಕಾ ಒಂದು ವಾರ ಶೂಟ್ ಮಾತ್ರ ಇದೆ ಎಂದಿದ್ದರು. ಆದರೆ, ಇಲ್ಲಿನೋಡಿದ್ರೆ ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಿದ್ದಾರೆ. ಯಾರೋ ಸುಮ್ಮನೆ ಆಟ ಆಡಿಸುತ್ತಿದ್ದಾರೆ ಎಂದು ಸುಮ್ಮನಾದೆ. ಆ ಬಳಿಕ ಮತ್ತೆ ಕರೆ ಬಂತು. ನಾನು ಹೋದೆ. ಹೀರೋಗೆ ಕಾಲು ಪೆಟ್ಟಾಗಿದ್ದರಿಂದ ಆ ಆಫರ್ ನಂಗೆ ಸಿಕ್ಕಿತು. ನಿರ್ದೇಶಕ ಶಶಾಂಕ್ ಕಥೆ ಹೇಳಿದರು, ಹಾಡುಗಳನ್ನು ಕೇಳಿಸಿದರು. ನಿರ್ಮಾಪಕ ಕೃಷ್ಣಪ್ಪ ನೀವು ಧಾರಾವಾಹಿಗಳಲ್ಲಿ ನಟಿಸೋ ಹುಡುಗ ಅಲ್ವ? ಒಳ್ಳೆದಾಗಲಿ ಎಂದು ಹಾರೈಸಿದರು. ಹೀಗಾಗಿ, ಇಂದಿಗೂ ಅವರ ಮೇಲೆ ಆ ಗೌರವ ಇದೆ. ನನಗೆ ಮೊದಲು ಅವಕಾಶ ಕೊಟ್ಟಿದ್ದಕ್ಕೆ ನಾನು ಇಲ್ಲಿದ್ದೇನೆ’ ಎಂದರು ಯಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.