ನಟಿ ಪವಿತ್ರಾ ಗೌಡ (Pavithra Gowda) ಅವರು ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಜಾರಿಯಲ್ಲಿ ಇರುವಾಗಲೇ ಹಲವು ಬಗೆಯ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ಈ ವರ್ಷ ನಿರ್ಮಾಪಕ ಸೌಂದರ್ಯಾ ಜಗದೀಶ್ (Soundarya Jagadeesh) ಅವರು ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಅವರ ಜೊತೆ ದರ್ಶನ (Darshan), ಪವಿತ್ರಾ ಗೌಡ ಒಡನಾಟ ಹೊಂದಿದ್ದರು. ಅಚ್ಚರಿ ಏನೆಂದರೆ, ಸೌಂದರ್ಯಾ ಜಗದೀಶ್ ಅವರ ಬ್ಯಾಂಕ್ ಖಾತೆಯಿಂದ ಪವಿತ್ರಾ ಗೌಡ ಅವರ ಖಾತೆಗೆ ಬರೋಬ್ಬರಿ 2 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ.
ಸೌಂದರ್ಯಾ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಂಕಷ್ಟ ಕೂಡ ಕಾರಣ ಎನ್ನಲಾಗಿದೆ. ಹೀಗಿರುವಾಗ ಅವರು ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ನೀಡಿದ್ದು ಯಾಕೆ ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಇನ್ನೊಂದು ಶಾಕಿಂಗ್ ವಿಚಾರ ಇದೆ. ಪವಿತ್ರಾ ಗೌಡಗೆ ಸೌಂದರ್ಯಾ ಜಗದೀಶ್ ಅವರು ಇಷ್ಟು ದೊಡ್ಡ ಮೊತ್ತದ ಹಣ ನೀಡಿದ್ದರ ಬಗ್ಗೆ ಜಗದೀಶ್ ಕುಟುಂಬದಬರಿಗೆ ಮಾಹಿತಿಯೇ ಇಲ್ಲ!
2017ರ ನವೆಂಬರ್ನಲ್ಲಿ ಸೌಂದರ್ಯಾ ಜಗದೀಶ್ ಅವರ ಖಾತೆಯಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಒಂದು ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿತ್ತು. ನಂತರ 2018ರ ಜನವರಿಯಲ್ಲಿ ಮತ್ತೊಂದು ಕೋಟಿ ರೂಪಾಯಿಯನ್ನು ಪವಿತ್ರಾ ಗೌಡ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಪವಿತ್ರಾ ಗೌಡ ಮನೆ ಖರೀದಿ ಮಾಡುವ ಸಮಯದಲ್ಲಿ ಈ ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಈ ಹಣವನ್ನು ಸೌಂದರ್ಯಾ ಜಗದೀಶ್ ನೀಡಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಪ್ಪು ಖಾರ ಇಲ್ಲದ ಊಟ, ಸೊಳ್ಳೆ ಕಾಟ: ಪವಿತ್ರಾ ಗೌಡಗೆ ನರಕವಾಯ್ತು ಜೈಲು
ಈ ಘಟನೆ ಬಗ್ಗೆ ಸೌಂದರ್ಯಾ ಜಗದೀಶ್ ಅವರ ಪತ್ನಿ ರೇಖಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಟಿವಿ ನೋಡಿದ ನಂತರವೇ ಈ ಬಗ್ಗೆ ತಿಳಿಯಿತು. ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ. ಅದರ ನಡುವೆ ಇದೇನಪ್ಪಾ ಅಂತ ಬೇಸರ ಆಯ್ತು. ಬಳಿಕ ನಾನು ವಿವರ ಪಡೆದುಕೊಂಡೆ. ಜಗದೀಶ್ ಅವರ ಪಾರ್ಟ್ನರ್ ಆದಂತಹ ಸುರೇಶ್ ಮತ್ತು ಹೊಂಬಣ್ಣ ಕುರಿತ ಡೆಟ್ನೋಟ್ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ಬ್ಯಾಂಕ್ ಸ್ಟೇಟ್ಮೆಂಟ್ ತೆಗೆಸುತ್ತಿದ್ದೇನೆ. ಪವಿತ್ರಾಗೆ ಹಣ ನೀಡಿದ್ದರಿಂದ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬುದೆಲ್ಲ ಸುಳ್ಳು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಪಾರ್ಟರ್ ಕಾರಣದಿಂದ’ ಎಂದು ರೇಖಾ ಜಗದೀಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.