
ರುಕ್ಮಿಣಿ ವಸಂತ್ (Rukmini Vasanth), ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗುವ ಎಲ್ಲ ಪ್ರತಿಭೆ, ಅಂದ ಇರುವ ಕನ್ನಡದ ನಟಿ. ಈಗಾಗಲೇ ರುಕ್ಮಿಣಿ ಅವರು ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಅದರಲ್ಲೂ ರುಕ್ಮಿಣಿ ವಸಂತ್ ಪ್ರಸ್ತುತ ಭಾರತದ ಮೂರು ದೊಡ್ಡ ಬಜೆಟ್ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’, ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಚಾಪ್ಟರ್ 1’ ಮತ್ತು ಜೂ ಎನ್ಟಿಆರ್ ನಟನೆಯ ‘ಡ್ರ್ಯಾಗನ್’. ಇತ್ತೀಚೆಗೆ ಮಾಧ್ಯಮದ ಕಾನ್ಕ್ಲೇವ್ ಒಂದರಲ್ಲಿ ಭಾಗಿ ಆಗಿದ್ದ ರುಕ್ಮಿಣಿ ವಸಂತ್, ಯಶ್ ಮತ್ತು ರಿಷಬ್ ಶೆಟ್ಟಿ ಅವರುಗಳ ಜೊತೆಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಯಶ್ ಜೊತೆಗೆ ನಟಿಸುತ್ತಿರುವ ಅನುಭವದ ಬಗ್ಗೆ ಮಾತನಾಡಿರುವ ನಟಿ ರುಕ್ಮಿಣಿ ವಸಂತ್, ‘ಯಶ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ಬಹಳ ಖುಷಿಯ ವಿಚಾರ. ನಾನು ಅವರಿಂದ ಸೆಟ್ನಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದೇನೆ. ಯಶ್ ಹೇಗೆ ಸಿನಿಮಾ ಮಾಡುತ್ತಾರೆ, ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಕಲಿಯುತ್ತಿದ್ದೇನೆ’ ಎಂದಿದ್ದಾರೆ ರುಕ್ಮಿಣಿ ವಸಂತ್.
‘ಟಾಕ್ಸಿಕ್’ ಸಿನಿಮಾ ಸೆಟ್ನಲ್ಲಿ ನಾನು ಸ್ಪಾಂಜ್ ರೀತಿ ಇದ್ದೇನೆ. ದೊರೆತ ಎಲ್ಲವನ್ನೂ ನಾನು ಶೇಖರಿಸಿಕೊಳ್ಳುತ್ತಿದ್ದೇನೆ, ನನ್ನ ಜ್ಞಾನ ಹೆಚ್ಚು ಮಾಡಿಕೊಳ್ಳುತ್ತಿದ್ದೇನೆ. ‘ಟಾಕ್ಸಿಕ್’ ಕೇವಲ ಸಾಧಾರಣ ಸಿನಿಮಾ ಅಲ್ಲ, ಅದನ್ನೂ ಮೀರಿದ ಒಂದು ಚಳವಳಿ ಅಥವಾ ಕ್ರಾಂತಿಯ ರೀತಿ ಇದೆ. ಅದೊಂದು ಬದಲಾವಣೆ ತರಬಹುದಾದ ಸಿನಿಮಾ ಆಗಿದೆ’ ಎಂದಿದ್ದಾರೆ ರುಕ್ಮಿಣಿ ವಸಂತ್.
ಇದನ್ನೂ ಓದಿ:ರುಕ್ಮಿಣಿ ವಸಂತ್ ಕೈಯಲ್ಲಿದೆ ಮೂರು ದೊಡ್ಡ ಸಿನಿಮಾಗಳು
ಇನ್ನು ‘ಕಾಂತಾರ ಚಾಪ್ಟರ್ 1’ ಸಿನಿಮಾನಲ್ಲಿ ನಟಿಸಿರುವ ಬಗ್ಗೆ ಮಾತನಾಡಿರುವ ರುಕ್ಮಿಣಿ ವಸಂತ್, ‘ರಿಷಬ್ ಶೆಟ್ಟಿ ಅವರದ್ದು ಬಹಳ ವಿಸ್ತಾರವಾದ ಮತ್ತು ಭಾರಿ ಐಶಾರಾಮಿ ಯೋಜನೆ. ಈಗಾಗಲೇ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಮೇಕಿಂಗ್ ವಿಡಿಯೋನಲ್ಲಿ ಅದರ ಝಲಕ್ ನೋಡಿರುತ್ತೀರಿ. ಕಾಂತಾರ ಭಾರಿ ಬಜೆಟ್ನ ಸಿನಿಮಾ ಆದರೆ ಅಷ್ಟೇ ನೆಲದ ಜೊತೆಗೆ ನಂಟು ಹೊಂದಿರುವ ಕತೆಯನ್ನು ಒಳಗೊಂಡ ಸಿನಿಮಾ. ಇದೊಂದು ಪಕ್ಕಾ ನೆಲಮೂಲದ ಕತೆಯ ಸಿನಿಮಾ, ಸಿನಿಮಾದ ಸಾಂಸ್ಕೃತಿಕ ಹಿನ್ನೆಲೆ ಅದ್ಭುತವಾಗಿದೆ’ ಎಂದಿದ್ದಾರೆ.
ರುಕ್ಮಿಣಿ ವಸಂತ್, ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರಿಗೆ ಭಾರಿ ಜನಪ್ರಿಯತೆ ಧಕ್ಕಿದೆ. ಈಗಾಗಲೇ ಕೆಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇದೀಗ ‘ಕಾಂತಾರ 1’, ‘ಟಾಕ್ಸಿಕ್’ ಮತ್ತು ಜೂ ಎನ್ಟಿಆರ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Wed, 10 September 25