ಗಮನ ಸೆಳೆದ ‘ದಿಂಸೋಲ್’ ಸಿನಿಮಾ ಮೋಷನ್ ಪೋಸ್ಟರ್; ಇದು ಕರಾವಳಿ ಭಾಗದ ಕಥೆ
‘ದಿಂಸೋಲ್’ ಚಿತ್ರವು ಸಚಿನ್ ವಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಟೈಟಲ್ ಮೂಲಕ ಗಮನ ಸೆಳೆದಿದೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ ಮಾಡುತ್ತಿದ್ದಾರೆ. ರವಿ ಬಸ್ರೂರು ಅವರು ಸಂಗೀತ ನೀಡುತ್ತಿದ್ದಾರೆ. ರಥ ಕಿರಣ್, ಶಿವಾನಿ ರೈ, ರಂಗಾಯಣ ರಘು, ಮಾನಸಿ ಸುಧೀರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ದಿಂಸೋಲ್’ (Dimsol) ಎಂಬ ಡಿಫರೆಂಟ್ ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲಾಗುತ್ತಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ‘ದಿಂಸೋಲ್’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಈ ಸಿನಿಮಾದ ಮೋಷನ್ ಪೋಸ್ಟರ್ (Dimsol Motion Poster) ಬಿಡುಗಡೆ ಮಾಡಲಾಗಿದೆ. ಮೋಷನ್ ಪೋಸ್ಟರ್ ನೋಡಿದರೆ ಸಿನಿಮಾ ಮೇಲೆ ಕುತೂಹಲ ಹೆಚ್ಚುತ್ತದೆ. ನಾಗೇಂದ್ರ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ದಿಂಸೋಲ್’ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿ ಬಗ್ಗೆ ತೋರಿಸಲಾಗುತ್ತದೆ.
‘ಕಾಂತಾರ’ ಬಳಿಕ ಕರಾವಳಿ ಸಂಸ್ಕೃತಿಯ ಸೊಡಗನ್ನು ಸಾರುವ ಒಂದಷ್ಟು ಸಿನಿಮಾಗಳು ಬರುತ್ತಿವೆ. ಅಂಥ ಸಿನಿಮಾಗಳ ಸಾಲಿಗೆ ‘ದಿಂಸೋಲ್’ ಕೂಡ ಸೇರ್ಪಡೆ ಆಗುತ್ತಿದೆ. ರಥ ಕಿರಣ್ ಅವರು ನಾಯನಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಶಿವಾನಿ ರೈ ಅವರು ಅಭಿನಯಿಸುತ್ತಿದ್ದಾರೆ. ಈ ಮೊದಲು ‘ಅಭಿರಾಮಚಂದ್ರ’ ಸಿನಿಮಾದಲ್ಲಿ ಅವರಿಬ್ಬರು ಒಟ್ಟಿಗೆ ನಟಿಸಿದ್ದರು.
‘ಅಭಿರಾಮಚಂದ್ರ’ ಸಿನಿಮಾದ ಬಳಿಕ ರಥ ಕಿರಣ್ ಮತ್ತು ಶಿವಾನಿ ರೈ ‘ದಿಂಸೋಲ್’ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ಮಾನಸಿ ಸುಧೀರ್, ಕಿರುತೆರೆ ನಟಿ ಅಮೃತಾ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
‘ದಿಂಸೋಲ್’ ಮೋಷನ್ ಪೋಸ್ಟರ್:
View this post on Instagram
ಅಷ್ಟಕ್ಕೂ ‘ದಿಂಸೋಲ್’ ಎಂದರೆ ಏನು? ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಆಚರಣೆ ಇದು. ಕರಾವಳಿಯ ಎಲ್ಲ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ನಿರ್ದೇಶಕ ನಾಗೇಂದ್ರ ಗಾಣಿಗ ಅವರು ದೃಶ್ಯ ರೂಪಕ್ಕೆ ತರುತ್ತಿದ್ದಾರೆ. ಮೊದಲ ಪೋಸ್ಟರ್ ಕೂಡ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾಗೆ ಶೂಟಿಂಗ್ ಪೂರ್ಣ
ಈ ಸಿನಿಮಾದ ಕಥೆಯು ದೇವರ ಬಗ್ಗೆ ಇದೆ ಎಂಬುದು ಈ ಪೋಸ್ಟರ್ ನೋಡಿದರೆ ತಿಳಿಯುತ್ತದೆ. ಸಿನಿಮಾದಲ್ಲಿ ಇನ್ನೂ ಏನೆಲ್ಲ ಇರಲಿದೆ ಎಂಬುದನ್ನು ನೋಡುವ ಕೌತುಕ ಹೆಚ್ಚಿದೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




