ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಸಖತ್’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕೌತುಕ ಮೂಡಿದೆ. ಅದನ್ನು ದುಪ್ಪಟ್ಟು ಮಾಡಲು ಈಗ ಟೀಸರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಕುರುಡನ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಆದರೆ ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಪ್ರೇಕ್ಷಕರ ಮನದಲ್ಲಿ ಮೂಡಿಸುವಲ್ಲಿ ಈ ಟೀಸರ್ ಯಶಸ್ವಿ ಆಗಿದೆ. ನ.12ಕ್ಕೆ ‘ಸಖತ್’ ರಿಲೀಸ್ ಆಗಲಿದೆ.
ಕಾಮಿಡಿ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ತಾಕತ್ತು ಗಣೇಶ್ ಅವರಿಗಿದೆ. ಅವರ ಜೊತೆ ಸುನಿ ಕೂಡ ಕೈ ಜೋಡಿಸಿದರೆ ಇಬ್ಬರ ಕಾಂಬಿನೇಷನ್ಗೆ ಆನೆ ಬಲ ಬಂದಂತಾಗುತ್ತದೆ. ಸದ್ಯ ‘ಸಖತ್’ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್ ಸೂಪರ್ ಆಗಿ ವಕೌರ್ಟ್ ಆಗುವ ಲಕ್ಷಣ ಗೋಚರಿಸುತ್ತಿದೆ. ಚಿಕ್ಕ ಟೀಸರ್ ಮೂಲಕವೇ ಸುನಿ ಮತ್ತು ಗಣೇಶ್ ಅವರು ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.
ಇಂದು (ಅ.24) ‘ಸಖತ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇರಲಿದೆ ಎಂಬುದಕ್ಕೆ ಈ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ಕಚಗುಳಿ ಇಡುವ ಡೈಲಾಗ್ಗಳು, ಗಣೇಶ್ ಅವರ ನಟನೆ, ಜೂಡಾ ಸ್ಯಾಂಡಿ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. ಗಣೇಶ್, ಸುನಿ, ಜೂಡಾ ಸ್ಯಾಂಡಿ ಕಾಂಬಿನೇಷನ್ನಲ್ಲಿ ಈ ಹಿಂದೆ ‘ಚಮಕ್’ ಚಿತ್ರ ಮೂಡಿಬಂದಿತ್ತು. ಅದು ಕೂಡ ಪ್ರೇಕ್ಷಕರಿಗೆ ತುಂಬ ಇಷ್ಟವಾಗಿತ್ತು. ಈಗ ಮತ್ತೊಮ್ಮೆ ಮೋಡಿ ಮಾಡಲು ಈ ಮೂವರು ಒಂದಾಗಿದ್ದಾರೆ.
(ಸಖತ್ ಸಿನಿಮಾ ಟೀಸರ್)
ಸಖತ್ ಸಿನಿಮಾದಲ್ಲಿ ಗಣೇಶ್ ಜೊತೆ ಸುರಭಿ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಶಾಂತ್ ಕುಮಾರ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.
ಇದಲ್ಲದೇ ನಿರ್ದೇಶಕ ಸುನಿ ಅವರು ‘ಅವತಾರ ಪುರುಷ’ ಚಿತ್ರದ ಬಿಡುಗಡೆಗೂ ಸಿದ್ಧವಾಗುತ್ತಿದ್ದಾರೆ. ಅತ್ತ ಗಣೇಶ್ ಅವರು ‘ಗಾಳಿಪಟ 2’, ‘ತ್ರಿಬಲ್ ರೈಡಿಂಗ್’ ಮುಂತಾದ ಸಿನಿಮಾಗಳ ಕೆಲಸದಲ್ಲೂ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ:
Salaga Movie Review: ‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್