‘ಸಲಾರ್’ ಸಿನಿಮಾದ ಕತೆ ಏನು? ಕ್ಲೈಮ್ಯಾಕ್ಸ್ನಲ್ಲಿ ಇರಲಿದೆ ಸಖತ್ ಟ್ವಿಸ್ಟ್
Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ದೇವ ಪಾತ್ರವನ್ನಷ್ಟೆ ಜನ ಈವರೆಗೆ ನೋಡಿದ್ದಾರೆ. ‘ಸಲಾರ್’ ಸಿನಿಮಾ ಅಸಲಿಗೆ ದೇವನ ಕತೆಯಲ್ಲ ಬದಲಿಗೆ ಸಲಾರ್ ಎಂಬಾತನ ಕತೆ. ಆದರೆ ಯಾರು ಈ ಸಲಾರ್? ದೇವನಿಗೂ ಸಲಾರ್ಗೂ ಏನು ಸಂಬಂಧ? ಕತೆ ಇಲ್ಲಿದೆ.
‘ಬಾಹುಬಲಿ’ (Bahubali) ಮೊದಲ ಭಾಗದ ಕ್ಲೈಮ್ಯಾಕ್ಸ್ ಹಲವರಿಗೆ ನೆನಪಿರಲೇ ಬೇಕು. ಬಾಹುಬಲಿಯನ್ನು ಗೆಳೆಯ, ರಾಜ, ಜೀವಕ್ಕೆ ಜೀವ ಎಂದುಕೊಂಡಿದ್ದ ಕಟ್ಟಪ್ಪನೇ ಬಾಹುಬಲಿಯನ್ನು ವಂಚನೆಯಿಂದ ಕೊಂದು ಬಿಡುತ್ತಾನೆ. ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕರಿಗೆ, ‘ಕಟ್ಟಪ್ಪ, ಬಾಹುಬಲಿಯನ್ನು ಏಕೆ ಕೊಂದ’ ಎಂಬ ಪ್ರಶ್ನೆ ಮನದಲ್ಲಿ ಉಳಿದುಬಿಟ್ಟಿತ್ತು. ಇದೀಗ ಅದೇ ‘ಬಾಹುಬಲಿ’ ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿಯೂ ಸಹ ‘ಬಾಹುಬಲಿ’ ರೀತಿಯದ್ದೇ ಟ್ವಿಸ್ಟ್ ಇರಲಿದೆ ಎನ್ನಲಾಗುತ್ತಿದೆ.
ಇದೀಗ ಬಿಡುಗಡೆ ಆಗಿರುವ ‘ಸಲಾರ್’ ಸಿನಿಮಾದ ಟ್ರೈಲರ್, ಹಾಡುಗಳಲ್ಲಿ ಪ್ರಭಾಸ್ರ ದೇವ ಪಾತ್ರವನ್ನು ಮಾತ್ರವೇ ತೋರಿಸಲಾಗಿದೆ. ‘ಸಲಾರ್’ ಪಾತ್ರವನ್ನು ತೋರಿಸಲಾಗಿಲ್ಲ. ಅಸಲಿಗೆ ಈ ಸಿನಿಮಾ ‘ಸಲಾರ್’ ಕುರಿತಾದ ಕತೆಯೇ ಹೊರತು ದೇವನ ಕತೆಯಲ್ಲ. ದೇವ ‘ಸಲಾರ್’ನ ಕತೆಗೆ ಪ್ರವೇಶಿಕೆ (ಎಂಟ್ರಿ) ಅಷ್ಟೆ. ‘ಸಲಾರ್’ ಸಿನಿಮಾದ ಮೊದಲ ಭಾಗದಲ್ಲಿ ದೇವನ ಕತೆಯ ಮೂಲಕ ‘ಸಲಾರ್’ನ ಕತೆಯನ್ನು ಅಷ್ಟಿಷ್ಟೆ ಕೆದಕಲಾಗುತ್ತದೆ. ಮೊದಲ ಭಾಗದ ಅಂತ್ಯದಲ್ಲಿ ‘ಸಲಾರ್’ ಹೇಗೆ ಸತ್ತ, ಯಾಕೆ ಸತ್ತ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡುವಂತೆ ಮಾಡಿ, ಮುಂದಿನ ಭಾಗದ ಬಗ್ಗೆ ನಿರೀಕ್ಷೆ ಹುಟ್ಟುವಂತೆ ಮಾಡುವುದು ಪ್ರಶಾಂತ್ ನೀಲ್ ಆಲೋಚನೆ ಆಗಿರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:‘ಸಲಾರ್’ ಚಿತ್ರೀಕರಣಕ್ಕೆ ಬಳಸಿರುವ ಕ್ಯಾಮೆರಾ ಯಾವುದು? ಬೆಲೆ ಎಷ್ಟು? ವಿಶೇಷತೆಗಳೇನು?
ಬಿಡುಗಡೆ ಆಗಿರುವ ಟ್ರೈಲರ್, ಪೋಸ್ಟರ್ ಗಳನ್ನು ಗಮನಿಸಿ ನೋಡಿ ಊಹಿಸುವುದಾದರೆ, ಸಲಾರ್, ದೇವನ ತಂದೆ, ಪೃಥ್ವಿರಾಜ್ ಸುಕುಮಾರ್ ನಿರ್ವಹಿಸಿರುವ ವರದರಾಜ್ ಮನ್ನಾವರ್ ಸೇರಿದಂತೆ ಇತರೆ ದುಷ್ಟರ ಕೂಟ, ವಶಪಡಿಸಿಕೊಳ್ಳಲು ಬಡಿದಾಡುತ್ತಿರುವ ಖಾನ್ಸಾರ್ ಪ್ರದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವನಾಗಿರಬಹುದು ಈ ಸಲಾರ್. ಆತನ ಜೊತೆಗೇ ಇದ್ದ ರಾಜಾ ಮನ್ನಾವರ್ (ಜಗಪತಿ ಬಾಬು) ಇನ್ನಿತರೆ ಕೆಲವರು ‘ಸಲಾರ್’ ಅನ್ನು ಉಪಾಯವಾಗಿ ಕೊಂದು ಖಾನ್ಸಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆ ಬಳಿಕ ಅವರವರಲ್ಲೆ ಜಗಳಗಳಾಗಿ ಖಾನ್ಸಾರ್ ಗಾಗಿ ಮತ್ತೆ ಕಿತ್ತಾಟ ಶುರುವಾಗಿ ರಾಜಾ ಮನ್ನಾವರ್ (ಜಗಪತಿ ಬಾಬು) ಹೊರಗೆ ಹೋದಾಗ, ಅವರ ಪುತ್ರ ವರದರಾಜ್ ಮನ್ನಾವರ್ (ಪೃಥ್ವಿರಾಜ್ ಸುಕುಮಾರ್) ಅನ್ನು ಹಿಮ್ಮೆಟ್ಟಿಸಿ ಖಾನ್ಸಾರ್ ಅನ್ನು ವಶಪಡಿಸಿಕೊಂಡಿದ್ದಾರೆ ಇತರೆ ದುಷ್ಟರು. ಆಗ ವರದರಾಜ್ ಮನ್ನಾವರ್ (ಪೃಥ್ವಿರಾಜ್ ಸುಕುಮಾರ್), ಮತ್ತೆ ಖಾನ್ಸಾರ್ ಅನ್ನು ವಶಪಡಿಸಿಕೊಳ್ಳಲು ತನ್ನ ಬಾಲ್ಯದ ಗೆಳೆಯ ದೇವ (ಪ್ರಭಾಸ್) ಸಹಾಯ ಕೇಳುತ್ತಾನೆ, ದೇವ ಬಂದು ಖಾನ್ಸಾರ್ ಅನ್ನು ಮತ್ತೆ ವರದರಾಜ್ ಮನ್ನಾವರ್ (ಪೃಥ್ವಿರಾಜ್ ಸುಕುಮಾರ್)ಗೆ ಗೆದ್ದು ಕೊಡುತ್ತಾನೆ.
ಬಹುಷಃ, ‘ಸಲಾರ್’ ಸಿನಿಮಾದ ಮೊದಲ ಭಾಗದ ಅಂತ್ಯದಲ್ಲಿ, ದೇವ (ಪ್ರಭಾಸ್)ಗೆ ತಿಳಿಯುತ್ತದೆ, ತನ್ನ ತಂದೆ ಸಲಾರ್ ಅನ್ನು ಮೋಸದಿಂದ ಕೊಂದಿದ್ದು ತನ್ನ ಬಾಲ್ಯದ ಗೆಳೆಯ ವರದರಾಜ್ ಮನ್ನಾವರ್ನ ತಂದೆ ರಾಜಾ ಮನ್ನಾವರ್ ಎಂದು, ಆಗ ಮತ್ತೆ ರಾಜಾ ಮನ್ನಾವರ್ ಹಾಗೂ ವರದರಾಜ್ ಮನ್ನಾವರ್ ವಿರುದ್ಧ ಹೋರಾಡಿ ತನ್ನ ತಂದೆಗೆ ಸೇರಿದ್ದ ಖಾನ್ಸಾರ್ ಅನ್ನು ಮತ್ತೆ ವಶಪಡಿಸಿಕೊಳ್ಳುತ್ತಾನೆ ದೇವ (ಪ್ರಭಾಸ್). ಇದು ಊಹಿತ ಕತೆಯಷ್ಟೆ, ಇದೇ ನಿಜವೆಂದೇನೂ ಅಲ್ಲ. ಈ ಊಹೆ ನಿಜವೇ ಅಥವಾ ಪ್ರಶಾಂತ್ ನೀಲ್ ಭಿನ್ನವಾಗಿ ಕತೆ ಹೆಣೆದಿದ್ದಾರೆಯೇ ಎಂಬುದನ್ನು ಚಿತ್ರಮಂದಿರಗಳಲ್ಲಿಯೇ ಹೋಗಿ ನೋಡಬೇಕು. ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Fri, 15 December 23