ವಿಷುವಲ್ ಎಫೆಕ್ಟ್ಸ್ ಕೊಡಲು ಬಾಹುಬಲಿಯಂಥ ಸಿನಿಮಾ ಬರಲಿಲ್ಲ: ಸ್ಪಿರಿಟ್ ಮೀಡಿಯಾ ಮುಚ್ಚಲು ಕಾರಣ ತಿಳಿಸಿದ ರಾನಾ ದಗ್ಗುಬಾಟಿ
Rana Daggubati and Visual Effects: ರಾನಾ ದಗ್ಗುಬಾಟಿ 2005ರಲ್ಲಿ ಸ್ಪಿರಿಟ್ ಮೀಡಿಯಾ ಕಂಪನಿ ಸ್ಥಾಪಿಸಿದ್ದರು. ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ಕೊಡುವ ಬಿಸಿನೆಸ್ ಅದರದ್ದು. 2006ರಲ್ಲಿ ಮಹೇಶ್ ಬಾಬು ನಟನೆಯ ಸೈನಿಕುಡು ಸಿನಿಮಾಗೆ ಇವರ ಕಂಪನಿಯೇ ಸ್ಪೆಷಲ್ ಎಫೆಕ್ಟ್ಸ್ ನೀಡಿದ್ದು. ಇದಕ್ಕಾಗಿ ರಾನಾ ಅವರಿಗೆ ಆಂಧ್ರದ ನಂದಿ ಪ್ರಶಸ್ತಿ ಬಂದಿತ್ತು. ಆದರೆ, ಬಾಹುಬಲಿಯಂಥ ಸಿನಿಮಾಗೆ ಕೆಲಸ ಮಾಡಬೇಕೆಂಬ ಕನಸು ಆಗ ನನಸಾಗಲಿಲ್ಲ. ಈ ಹತಾಶೆಯಲ್ಲಿ ಕಂಪನಿ ಮಾರಿದರಂತೆ ದಗ್ಗುಬಾಟಿ.
ರಾನಾ ದಗ್ಗುಬಾಟಿ (Rana Daggubati ಸದ್ಯ ಟಾಲಿವುಡ್ನಲ್ಲಿ ಇರುವ ಶ್ರೇಷ್ಠ ನಟರಲ್ಲಿ ಒಬ್ಬರು. ಬಾಹುಬಲಿ ಸಿನಿಮಾದಲ್ಲಿ ಇವರ ವಿಲನ್ ಪಾತ್ರ ಕಂಡು ಸೋಜಿಗರಾಗದವರು ಯಾರಿದ್ದಾರೆ ಹೇಳಿ..? ಇವರು ನಟನೆಗೆ ಬರುವ ಮುನ್ನ ನಿರ್ಮಾಪಕ ಮತ್ತು ವಿಷುವಲ್ ಎಫೆಕ್ಟ್ಸ್ ತಂತ್ರಜ್ಞರೂ (visual effects ಹೌದು. 2010ರಲ್ಲಿ ಇವರು ನಟನೆಗೆ ಬಂದವರು. ಆದರೆ, 2005ರಲ್ಲೇ ಇವರು ಸ್ಪಿರಿಟ್ ಮೀಡಿಯಾ (spirit media) ಎಂಬ ವಿಷುವಲ್ ಎಫೆಕ್ಟ್ಸ್ ಕಂಪನಿ ಸ್ಥಾಪಿಸಿದ್ದರಂತೆ. ಆಗ ಹೇಳಿಕೊಳ್ಳುವ ದೊಡ್ಡ ಸಿನಿಮಾಗಳ್ಯಾವುವೂ ಬರದೇ ಕೊನೆಗೆ ಅದನ್ನು ಮಾರಿ ಕೈತೊಳೆದುಕೊಂಡರಂತೆ.
ರಾಣಾ ದಗ್ಗುಬಾಟಿ ಅಥವಾ ರಾನಾ ದಗ್ಗುಬಾಟಿ ಅವರ ಪೂರ್ಣ ಹೆಸರು ರಾಮಾನಾಯ್ಡು ದಗ್ಗುಬಾಟಿ. ಖ್ಯಾತ ಟಾಲಿವುಡ್ ನಿರ್ಮಾಪಕ ರಾಮಾ ನಾಯ್ಡು (producer ramanaidu) ಅವರ ಮೊಮ್ಮಗ. ಅಕ್ಕಿನೇನಿ-ದಗ್ಗುಬಾಟಿ (Daggubati Akkineni family) ಕುಟುಂಬದ ಸದಸ್ಯ. ಅಕ್ಕಿನೇನಿ ನಾಗೇಶ್ವರರಾವ್, ನಾಗಾರ್ಜುನ ಮೊದಲಾದವರು ಈ ಕುಟುಂಬಕ್ಕೆ ಸೇರಿದವರು.
ಬಾಹುಬಲಿಯಂತಹ ಸಿನಿಮಾಗಾಗಿ ಕಾಯುತ್ತಿದ್ದೆ…
ರಾನಾ ದಗ್ಗುಬಾಟಿ 2005ರಲ್ಲಿ ಸ್ಪಿರಿಟ್ ಮೀಡಿಯಾ ಕಂಪನಿ ಸ್ಥಾಪಿಸಿದ್ದರು. ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ಕೊಡುವ ಬಿಸಿನೆಸ್ ಅದರದ್ದು. 2006ರಲ್ಲಿ ಮಹೇಶ್ ಬಾಬು ನಟನೆಯ ಸೈನಿಕುಡು ಸಿನಿಮಾಗೆ ಇವರ ಕಂಪನಿಯೇ ಸ್ಪೆಷಲ್ ಎಫೆಕ್ಟ್ಸ್ ನೀಡಿದ್ದು. ಇದಕ್ಕಾಗಿ ರಾನಾ ಅವರಿಗೆ ಆಂಧ್ರದ ನಂದಿ ಪ್ರಶಸ್ತಿ ಬಂದಿತ್ತು.
ರಾನಾ ದಗ್ಗುಬಾಟಿ ಅವರು ಬಹಳ ದೊಡ್ಡ ಆಲೋಚನೆಯಲ್ಲಿ ಸ್ಪಿರಿಟ್ ಮೀಡಿಯಾ ಸ್ಥಾಪಿಸಿದ್ದರು. ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ವಿಷುವಲ್ ಎಫೆಕ್ಟ್ಸ್ ಕೊಡಲು ತಹತಹಿಸಿದ್ದರು. ಆದರೆ, ಆ ರೀತಿ ಕೆಲಸ ಬೇಡುವ ಸಿನಿಮಾ ಯಾವುದೂ ಬರಲೇ ಇಲ್ಲ. 70ಕ್ಕೂ ಹೆಚ್ಚು ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ನೀಡಿದರೂ ರಾಜಮೌಳಿ ಅವರ ಬಾಹುಬಲಿಯಂಥ ಸಿನಿಮಾಗಾಗಿ ದಗ್ಗುಬಾಟಿ ಕಾಯುತ್ತಿದ್ದರು. ಆದರೆ ಆಗ ಇಂಥ ಸಿನಿಮಾ ಬರಲಿಲ್ಲ.
ಐದು ವರ್ಷ ಸ್ಪಿರಿಟ್ ಮೀಡಿಯಾ ನಡೆಸಿದ ರಾಣಾ ದಗ್ಗುಬಾಟಿಗೆ ನಿರಾಸೆ ಮತ್ತು ಹತಾಶೆ ಎರಡೂ ಆಯಿತು. ಕೊನೆಗೆ ಪ್ರೈಮ್ ಫೋಕಸ್ ಎಂಬ ಕಂಪನಿಗೆ ಸ್ಪಿರಿಟ್ ಮೀಡಿಯಾವನ್ನು ಮಾರಿದರು. ಈ ಪ್ರೈಮ್ ಫೋಕಸ್ ಈಗ ವಿಶ್ವದ ಅತಿದೊಡ್ಡ ವಿಷುವಲ್ ಎಫೆಕ್ಟ್ಸ್ ಕಂಪನಿ ಆಗಿದೆ.
ತನ್ನ ಸ್ಪಿರಿಟ್ ಮೀಡಿಯಾ ಕಂಪನಿ ಮಾರುವ ಸಂದರ್ಭದಲ್ಲಿ ರಾಣಾ ದಗ್ಗುಬಾಟಿ ಅವರಿಗೆ ತಾನು ಬಹಳ ಮುಂಚಿತವಾಗಿ ವಿಷುವಲ್ ಎಫೆಕ್ಟ್ಸ್ ಕ್ಷೇತ್ರಕ್ಕೆ ಕಾಲಿಟ್ಟುಬಿಟ್ಟೆ ಅಂತ ಅನಿಸಿತಂತೆ.
ಅಪ್ಪ ಮಾತು ಬಿಟ್ಟರು…
ರಾಣಾ ದಗ್ಗುಬಾಟಿ ಅವರು ಸ್ಪಿರಿಟ್ ಮೀಡಿಯಾ ಕಂಪನಿ ಮುಚ್ಚಿದಾಗ ಅವರ ತಂದೆ ಕೆಲ ಕಾಲ ಮಾತುಬಿಟ್ಟಿದ್ದರಂತೆ. ನಿನಗೆ ಕಂಪನಿ ನಡೆಸಲು ಆಗದೇ ಮುಚ್ಚುತ್ತಿದ್ದೀಯಾ ಎಂಬುದು ಅವರ ಆಕ್ಷೇಪವಾಗಿತ್ತು. ಅದೇನೇ ಆಗಲೀ, ರಾಣಾ ದಗ್ಗುಬಾಟಿ ತಮ್ಮ ಸ್ಪಿರಿಟ್ ಮೀಡಿಯಾ ಮುಚ್ಚಿದ ಐದಾರು ವರ್ಷಕ್ಕೆ ಅವರ ಕನಸಿನ ಬಾಹುಬಲಿ ಸಿನಿಮಾ ಬಂದಿತ್ತು. ಕಾಕತಾಳೀಯವಾಗಿ, ಎರಡು ಸರಣಿಯ ಆ ಸಿನಿಮಾದಲ್ಲಿ ದಗ್ಗುಬಾಟಿ ಪ್ರಮುಖ ವಿಲನ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ ಮೇಲೆ ಹಿರಿಯ ನಿರ್ದೇಶಕ ಗರಂ: ಕಾರಣ?
ರಾಣಾ ದಗ್ಗುಬಾಟಿ ಆಗ ವಿಷುವಲ್ ಎಫೆಕ್ಟ್ಸ್ ವ್ಯವಹಾರದಲ್ಲಿ ಇದ್ದದ್ದು ಮಾತ್ರವಲ್ಲ, ಪ್ರೊಡ್ಯೂಸರ್ ಕೂಡ ಆಗಿದ್ದರು. ಸದ್ಯ ಹಿರಣ್ಯಕಶಿಪು ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ರಾನಾ ದಗ್ಗುಬಾಟಿ, ನಟನೆಯ ಜೊತೆಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತಿ ಬ್ಯುಸಿ ಇದ್ದಾರೆ.
ಇವತ್ತು ದಿ ಸ್ಪಿರಿಟ್ ಮೀಡಿಯಾ ಎಂಬ ಇನ್ನೊಂದು ಕಂಪನಿಯನ್ನು ರಾಣಾ ದಗ್ಗುಬಾಟಿ ನಿರ್ವಹಿಸುತ್ತಿದ್ದಾರೆ. ಇದು ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ