ಹೊಸ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ ಮೇಲೆ ಹಿರಿಯ ನಿರ್ದೇಶಕ ಗರಂ: ಕಾರಣ?
Rana Daggubati: ರಾಣಾ ದಗ್ಗುಬಾಟಿ 'ಹಿರಣ್ಯಕಷ್ಯಪು' ಸಿನಿಮಾವನ್ನು ತ್ರಿವಿಕ್ರಮ್ ಒಡಗೂಡಿ ಘೋಷಿಸಿರುವುದಕ್ಕೆ ತೆಲುಗಿನ ನಿರ್ದೇಶಕ ಗುಣಶೇಖರ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟ, ನಿರ್ಮಾಪಕ, ವಿತರಕ ರಾಣಾ ದಗ್ಗುಬಾಟಿ (Rana Daggubati) ಒಂದರ ಹಿಂದೊಂದು ಸಿನಿಮಾಗಳನ್ನು ಘೋಷಿಸುತ್ತಿದ್ದಾರೆ. ತೆಲುಗಿನಲ್ಲಿ ಸಿನಿಮಾಗಳು, ಹಿಂದಿ ವೆಬ್ ಸರಣಿಗಳಲ್ಲಿ ಹೀಗೆ ಒಂದರ ಹಿಂದೊಂದು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರುವ ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೆ ‘ಹಿರಣ್ಯಕಷ್ಯಪು’ (Hiranyakashipu) ಸಿನಿಮಾ ಘೋಷಿಸಿದ್ದಾರೆ. ಸಿನಿಮಾ ಘೋಷಣೆಯ ಬೆನ್ನಲ್ಲೆ ತೆಲುಗು ಚಿತ್ರರಂಗದ (Tollywood) ಹಿರಿಯ ನಿರ್ದೇಶಕರೊಬ್ಬರು ಈ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.
ರಾಣಾ ದಗ್ಗುಬಾಟಿಯ ನಟಿಸಲಿರುವ ‘ಹಿರಣ್ಯಕಷ್ಯಪ’ ಸಿನಿಮಾವನ್ನು ತೆಲುಗಿನ ಯಶಸ್ವಿ ನಿರ್ದೇಶಕ ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಸಿನಿಮಾವನ್ನು ನಿರ್ದೇಶನ ಮಾಡಬೇಕಿದ್ದಿದ್ದು ನಿರ್ದೇಶಕ ಗುಣಶೇಖರ್. ಈ ಹಿಂದೆ ‘ಚೂಡಾಲನಿ ವುಂದಿ’, ‘ಮೃಗರಾಜು’, ಬ್ಲಾಕ್ ಬಸ್ಟರ್ ಹಿಟ್ ‘ಒಕ್ಕಡು’, ‘ಅರ್ಜುನ್’ ಇತ್ತೀಚೆಗೆ ಸಮಂತಾ ನಟಿಸಿದ್ದ ‘ಶಾಕುಂತಲಂ’ ಸಿನಿಮಾಗಳನ್ನು ನಿರ್ದೇಶಿಸಿರುವ ಗುಣಶೇಖರ್, ‘ಹಿರಣ್ಯಕಷ್ಯಪ’ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಅದೀಗ ತ್ರಿವಿಕ್ರಮ್ ಕೈ ಸೇರಿದೆ.
ಗುಣಶೇಖರ್ ಅವರು ಈ ಹಿಂದೆ ಹಲವು ಬಾರಿ ‘ಹಿರಣ್ಯಕಷ್ಯಪ’ ತಮ್ಮ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳಿಕೊಂಡಿದ್ದರು. ಕೆಲವು ನಿರ್ಮಾಪಕರು ಹಾಗೂ ನಟರಿಗೆ ಕತೆ ಸಹ ಹೇಳಿದ್ದರಂತೆ. ರಾಣಾ ಹಾಗೂ ಗುಣಶೇಖರ್ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆಯೂ ಆಗಿತ್ತೆನ್ನಲಾಗುತ್ತದೆ. ಆದರೆ ಹಠಾತ್ತನೆ ರಾಣಾ ದಗ್ಗುಬಾಟಿ, ತ್ರಿವಿಕ್ರಮ್ ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಗುಣಶೇಖರ್ ಅಸಮಾಧಾನಕ್ಕೆ ಕಾರಣವಾಗಿದ್ದು, ಸಿನಿಮಾ ಘೋಷಣೆಯಾದ ಬೆನ್ನಲ್ಲೆ ಟ್ವೀಟ್ ಒಂದನ್ನು ಗುಣಶೇಖರ್ ಮಾಡಿದ್ದಾರೆ.
”ದೇವರು ನಿನ್ನ ಕತೆ ಹೆಣೆದಿದ್ದಾನೆ ಎಂದರೆ ನಿನ್ನ ಮೇಲೆ ಆತ ನಿಗಾ ಸಹ ವಹಿಸಿರುತ್ತಾನೆ ಎಂಬುದನ್ನು ಮರೆಯಬೇಡ. ಅನೈತಿಕ ಕೃತ್ಯಗಳಿಗೆ ನೈತಿಕ ವಿಧಾನಗಳ ಮೂಲಕ ಉತ್ತರ ನೀಡಲಾಗುವುದು” ಎಂದು ಗುಣಶೇಖರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಹೋಬಲಂನಲ್ಲಿನ ಹಿರಣ್ಯಕಶ್ಯಪು ದೇವಾಲಯವುಳ್ಳ ಉಗ್ರಸ್ತಂಭಂ ಬೆಟ್ಟದ ಮೇಲೆ ತಾವು ಕುಳಿತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಉಗ್ರಸ್ತಂಭಂ ಬೆಟ್ಟ ಬಹಳ ಕಡಿದಾದ ಏಕಶಿಲಾ ಬೆಟ್ಟವಾಗಿದೆ. ಅದನ್ನು ಏರುವುದು ಬಹಳ ಕಷ್ಟ. ‘ಹಿರಣ್ಯಕಷ್ಯಪ’ ಸಿನಿಮಾದ ಕತೆ ರೆಡಿ ಮಾಡಲು ಗುಣಶೇಖರ್ ಅಲ್ಲೆಲ್ಲ ತಿರುಗಾಡಿದ್ದರು. ಮಾಹಿತಿಗಳನ್ನು ಸಂಗ್ರಹಿಸಿದ್ದರು. ಇದೀಗ ಅದೇ ಚಿತ್ರಗಳನ್ನು ಗುಣಶೇಖರ್ ಹಂಚಿಕೊಂಡಿದ್ದಾರೆ.
ಗುಣಶೇಖರ್ ನಿರ್ದೇಶನದ ಎರಡು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಅನುಷ್ಕಾ ಶೆಟ್ಟಿ ನಟಿಸಿದ್ದ ‘ರುದ್ರಮ್ಮದೇವಿ’ ಹಾಗೂ ಸಮಂತಾ ನಟಿಸಿದ್ದ ‘ಶಾಕುಂತಲಂ’ ಸಿನಿಮಾಗಳು ಸೋಲುಂಡಿವೆ. ಅಲ್ಲದೆ, ಗುಣಶೇಖರ್ಗೆ ಕಮರ್ಷಿಯಲ್ ನಿರ್ದೇಶಕ ಎಂಬ ಹೆಸರಿಲ್ಲ ಬದಲಿಗೆ ಬ್ರಿಡ್ಜ್ ಮಾದರಿ ಸಿನಿಮಾಗಳ ನಿರ್ದೇಶಕ ಎಂಬ ಹೆಸರಿದೆ. ಆದರೆ ತ್ರಿವಿಕ್ರಮ್ ಪಕ್ಕಾ ಕಮರ್ಶಿಯಲ್ ನಿರ್ದೇಶಕ. ಸೂಕ್ಷ್ಮವಾದ ಕತೆಗಳನ್ನು ಆಯ್ದುಕೊಂಡು ಲಾಜಿಕ್ ಬಿಟ್ಟುಕೊಡದೆ ಸಿನಿಮಾಗಳನ್ನು ಮಾಡುವುದರಲ್ಲಿ ತ್ರಿವಿಕ್ರಮ್ ನಿಸ್ಸೀಮರು. ಇದೇ ಕಾರಣಕ್ಕೆ ಗುಣಶೇಖರ್ ಬದಲಿಗೆ ತ್ರಿವಿಕ್ರಮ್ ಅನ್ನು ರಾಣಾ ದಗ್ಗುಬಾಟಿ ಆರಸಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಪ್ರಸ್ತುತ ಅಮೆರಿಕದಲ್ಲಿದ್ದು ಪ್ರಭಾಸ್ರ ಪ್ರಾಜೆಕ್ಟ್ ಕೆ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ತ್ರಿವಿಕ್ರಮ್, ಮಹೇಶ್ ಬಾಬುಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದಾದ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಬಳಿಕವಷ್ಟೆ ರಾಣಾ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Thu, 20 July 23