ತೆರೆಗೆ ಬಂದ ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾದಲ್ಲಿ ಪ್ರಕೃತಿ ಉಳಿಸಿ ಎಂಬ ಸಂದೇಶ

| Updated By: ರಾಜೇಶ್ ದುಗ್ಗುಮನೆ

Updated on: Apr 01, 2022 | 10:51 AM

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್​ ನಟಿಸಿದ್ದಾರೆ.

ತೆರೆಗೆ ಬಂದ ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾದಲ್ಲಿ ಪ್ರಕೃತಿ ಉಳಿಸಿ ಎಂಬ ಸಂದೇಶ
Follow us on

ನಟ ಸಂಚಾರಿ ವಿಜಯ್ (Sanchari Vijay)​ ಅವರು ನಿಧನರಾಗಿರುವುದು ಸ್ಯಾಂಡಲ್​ವುಡ್​ ಪಾಲಿಗೆ ಬಹುದೊಡ್ಡ ನಷ್ಟ. ಅಭಿಮಾನಿಗಳು ಎಂದೂ ಮರೆಯಲಾಗದಂತಹ ಕೆಲವು ಪಾತ್ರಗಳಲ್ಲಿ ಅವರು ಅಭಿನಯಿಸಿದ್ದರು. ‘ನಾನು ಅವನಲ್ಲ ಅವಳು’, ‘ಹರಿವು’ ಮುಂತಾದ ಸಿನಿಮಾಗಳಲ್ಲಿ ಅವರ ನಟನೆ ಕಂಡು ಎಲ್ಲರೂ ಮೆಚ್ಚಿಕೊಂಡಿದ್ದರು. ಇನ್ನೂ ಹಲವು ಚಿತ್ರಗಳಲ್ಲಿ ಅವರು ನಟಿಸಬೇಕಿತ್ತು. ಆದರೆ, ಅದಕ್ಕೂ ಮೊದಲೇ ನಿಧನ ಹೊಂದಿದರು. ಈಗ ಅವರ ನಟನೆಯ ಕೊನೆಯ ಸಿನಿಮಾ ‘ತಲೆದಂಡ’ (Taledanda Movie) ಇಂದು (ಏಪ್ರಿಲ್​ 1) ರಿಲೀಸ್ ಆಗಿದೆ. ಟೀಸರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾವನ್ನು ನೋಡೋಕೆ ಅಭಿಮಾನಿಗಳು ಕಾದಿದ್ದಾರೆ.

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್​ ನಟಿಸಿದ್ದಾರೆ. ಆದರೆ ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

‘ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗರ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿದೆ. ಇದಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಿ ಪ್ರತಿ ಸನ್ನಿವೇಶಗಳಿಗೆ ಸಂಗೀತ ನೀಡಿದ್ದೇವೆ. ಇನ್ನೊಂದೆಡೆ, ಜನಪದ ಗಾಯಕರನ್ನು ಸ್ಟುಡಿಯೋಗೆ ಕರೆಸಿ ಅವರಿಂದ ಹಾಡಿಸುವುದು ತುಂಬಾ ಕಷ್ಟಕರ ಕೆಲಸವಾಗಿತ್ತು. ಉತ್ತಮ ಔಟ್ ಪುಟ್​ಗಾಗಿ ರೆಕಾರ್ಡಿಂಗ್ ವೇಳೆ ಸಾಕಷ್ಟು ಶ್ರಮಪಟ್ಟಿದ್ದೇವೆ. ಪ್ರತಿ ಫ್ರೇಮ್, ಪ್ರತಿ ಬಿಟ್ ಹಾಡುಗಳಿಗೂ ತುಂಬಾನೇ ಎಫರ್ಟ್ ಹಾಕಿದ್ದೇವೆ’ ಎಂಬುದು ಸಂಗೀತ ನಿರ್ದೇಶಕ ಹರಿ ಕಾವ್ಯ ಅವರ ಮಾತು.

ಇಡೀ ಸಿನಿಮಾದಲ್ಲಿ ವಿಜಯ್​ ಎಷ್ಟು ಅದ್ಭುತವಾಗಿ ನಟಿಸಿದ್ದಾರೆ ಎಂಬುದಕ್ಕೆ ಕಳೆದ ವರ್ಷ ರಿಲೀಸ್​ ಆದ ಟೀಸರ್​ ಸಾಕ್ಷ್ಯ ಒದಗಿಸಿತ್ತು. ಟೀಸರ್​ ನೋಡಿದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇಂದು ರಿಲೀಸ್​ ಆದ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಹಲವಾರು ಪ್ರಾಜೆಕ್ಟ್​ಗಳಲ್ಲಿ ಸಂಚಾರಿ ವಿಜಯ್ ನಟಿಸಬೇಕಿತ್ತು . ಆದರೆ ಅವುಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ನಿಧನ ಹೊಂದಿದ್ದು ದುಃಖದ ಸಂಗತಿ. ಇದೇ ಇದೇ ದುಃಖದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಪ್ರವೀಣ್ ಕೃಪಾಕರ್ ಅವರ ನಿರ್ದೇಶನ ಚಿತ್ರಕ್ಕೆ ಇದೆ. ನಾಯಕಿ ಸಾಕಿ ಪಾತ್ರದಲ್ಲಿ ಚೈತ್ರಾ ಆಚಾರ್ ನಟಿಸಿದ್ದಾರೆ. ವಿಜಯ್ ತಾಯಿ ಪಾತ್ರದಲ್ಲಿ ಮಂಗಳಾ ನಟಿಸಿದ್ದು, ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ಬಣ್ಣ ಹಚ್ಚಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ. ಸುರೇಶ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹರಿಕಾವ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೂ ಸಂಕಲನವನ್ನು ಬಿ.ಎಸ್. ಕೆಂಪರಾಜ್ ಮಾಡಿದ್ದು, ಛಾಯಾಗ್ರಹಣವನ್ನು ಅಶೋಕ್ ಕಶ್ಯಪ್ ನಿಭಾಯಿಸಿದ್ದಾರೆ.

2021ರ ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ವಿಜಯ್​ಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ವಿಜಯ್​ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಇದನ್ನೂ ಓದಿ: ‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​

Puneeth Rajkumar: ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಪ್ರೇರಣೆ; ರಾಜ್ಯದಲ್ಲಿ ನೇತ್ರದಾನ ಶೇ.20-30ರಷ್ಟು ಹೆಚ್ಚಳ

Published On - 8:23 am, Fri, 1 April 22