Sanchari Vijay Death Anniversary: ಕೇವಲ 37ನೇ ವಯಸ್ಸಿಗೆ ನಟ ಸಂಚಾರಿ ವಿಜಯ್ ಅವರು (Sanchari Vijay) ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ವಿಧಿಯ ಆಟಕ್ಕೆ ಅವರು ಬಲಿಯಾಗಬೇಕಾಯಿತು. 2021ರ ಜೂನ್ 15ರಂದು ಕೇಳಿಬಂದ ಆ ಶಾಕಿಂಗ್ ಸುದ್ದಿಯನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಲೇ ಇಲ್ಲ. ಸಂಚಾರಿ ವಿಜಯ್ ಇನ್ನಿಲ್ಲ ಎಂದು ತಿಳಿದಾಗ ಕುಟುಂಬದವರಿಗೆ ಮತ್ತು ಆಪ್ತರಿಗೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ರಸ್ತೆ ಅಪಘಾತದಲ್ಲಿ ಗಾಯಗೊಂಡ ಅವರು ನಿಧನರಾಗಿ ಇಂದಿಗೆ (ಜೂನ್ 15) ಒಂದು ವರ್ಷ ಕಳೆದಿದೆ. ಓರ್ವ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ (Sandalwood) ಬಡವಾಗಿದೆ. ಸಂಚಾರಿ ವಿಜಯ್ ಅವರ ಸ್ಥಾನವನ್ನು ತುಂಬಬಲ್ಲ ಮತ್ತೊರ್ವ ನಟನನ್ನು ಕಾಣಲು ಸಾಧ್ಯವಿಲ್ಲ. ಮೊದಲ ವರ್ಷದ ಪುಣ್ಯ ಸ್ಮರಣೆಯಲ್ಲಿ (Sanchari Vijay Death Anniversary) ಎಲ್ಲರೂ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಮಾಡಿದ ಸಾಧನೆಗಳನ್ನು ಶ್ಲಾಘಿಸುತ್ತಿದ್ದಾರೆ.
2011ರಲ್ಲಿ ಸಂಚಾರಿ ವಿಜಯ್ ಅವರು ಸಿನಿಮಾರಂಗಕ್ಕೆ ಎಂಟ್ರಿ ನೀಡಿದರು. ಅವರು ನಟಿಸಿದ ಮೊದಲ ಸಿನಿಮಾ ‘ರಂಗಪ್ಪ ಹೋಗ್ಬಿಟ್ನಾ’. ಅವರಿಗೆ ಮೊದಲ ಬಾರಿಗೆ ಖ್ಯಾತಿ ತಂದುಕೊಟ್ಟ ಸಿನಿಮಾ ‘ಹರಿವು’. ಆ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದ್ದರು. ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಮನೋಜ್ಞವಾಗಿ ಅಭಿನಯಿಸಿದ್ದರು. ‘ಹರಿವು’ ಸಿನಿಮಾ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡು ಬೀಗಿತು.
ಇದನ್ನೂ ಓದಿ: ಅಗಲಿದ ಗೆಳೆಯ ಸಂಚಾರಿ ವಿಜಯ್ಗಾಗಿ ‘ಪುಕ್ಸಟ್ಟೆ ಲೈಫು’ ಚಿತ್ರದ ಟಿಕೆಟ್ ಖರೀದಿಸಿ, ಪತ್ರ ಬರೆದ ಮಂಸೋರೆ
ಇಡೀ ದೇಶಕ್ಕೆ ಸಂಚಾರಿ ವಿಜಯ್ ಅವರ ಅದ್ಭುತ ಪ್ರತಿಭೆ ಅನಾವರಣ ಆಗಿದ್ದು ‘ನಾನು ಅವನಲ್ಲ ಅವಳು’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರು ಮಂಗಳಮುಖಿ ಪಾತ್ರ ಮಾಡಿದ್ದರು. ಆ ಪಾತ್ರಕ್ಕಾಗಿ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿಯೂ ಅವರ ಮುಡಿಗೇರಿತು. ಆ ಬಳಿಕ ಸಂಚಾರಿ ವಿಜಯ್ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡರು.
ಇದನ್ನೂ ಓದಿ: ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ
ರಾಷ್ಟ್ರ ಪ್ರಶಸ್ತಿ ಸಿಕ್ಕ ನಂತರ ಸಂಚಾರಿ ವಿಜಯ್ ಹೆಚ್ಚು ಬ್ಯುಸಿ ಆದರು. ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿಕೊಂಡ ಬಂದವು. ಹಲವು ಬಗೆಯ ಪಾತ್ರಗಳ ಮೂಲಕ ಜನರನ್ನು ಅವರು ರಂಜಿಸಿದರು. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ಅವರಿಂದ ಸಿಗಬೇಕಾದ ಕೊಡುಗೆ ಇನ್ನೂ ಸಾಕಷ್ಟಿತ್ತು. ಅಷ್ಟರಲ್ಲಾಗಲೇ ಅವರು ಇಹಲೋಕ ತ್ಯಜಿಸಿದ್ದು ತೀರಾ ನೋವಿನ ಸಂಗತಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Wed, 15 June 22