ಶಸ್ತ್ರಚಿಕಿತ್ಸೆ ನಡೆಸಿ 10 ಗಂಟೆ ಕಳೆದರೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಸಂಚಾರಿ ವಿಜಯ್; ಪರಿಸ್ಥಿತಿ ಮತ್ತಷ್ಟು ಗಂಭೀರ

| Updated By: ಮದನ್​ ಕುಮಾರ್​

Updated on: Jun 13, 2021 | 5:25 PM

Sanchari Vijay Accident: ಈ ವಿಚಾರ ಕೇಳಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇನ್ನು,ಅಪೋಲೊ ಆಸ್ಪತ್ರೆಗೆ ನಟ ನೀನಾಸಂ ಸತೀಶ್ ಭೇಟಿ  ನೀಡಿ ವೈದ್ಯರ ಜತೆ ಮಾತುಕತೆ ನಡೆಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿ 10 ಗಂಟೆ ಕಳೆದರೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಸಂಚಾರಿ ವಿಜಯ್; ಪರಿಸ್ಥಿತಿ ಮತ್ತಷ್ಟು ಗಂಭೀರ
ನಟ ಸಂಚಾರಿ ವಿಜಯ್
Follow us on

ನಟ ಸಂಚಾರಿ ವಿಜಯ್​ ಅಪಘಾತಕ್ಕೆ ಒಳಗಾಗಿದ್ದಾರೆ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಆತಂಕ ಮೂಡಿದ್ದು, ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಶನಿವಾರ (ಜೂನ್​ 12) ರಾತ್ರಿ ಸಂಚಾರಿ ವಿಜಯ್​ ಗೆಳೆಯನ ಜತೆ ಬೈಕ್​ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಉಂಟಾಗಿದ್ದು, ತೊಡೆಯಲ್ಲಿ ಗಾಯಗಳಾಗಿವೆ. ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

‘ನಟ ಸಂಚಾರಿ ವಿಜಯ್​ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದಾರೆ. ವಿಜಯ್​ಗೆ ತುಂಬಾನೆ ಹಾನಿಯಾಗಿದೆ’ ಎಂದು ನಟ ಸಂಚಾರಿ ವಿಜಯ್​ ಆಪ್ತರಾದ ನಿರ್ದೇಶಕ ಲಿಂಗದೇವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇನ್ನು,ಅಪೋಲೊ ಆಸ್ಪತ್ರೆಗೆ ನಟ ನೀನಾಸಂ ಸತೀಶ್ ಭೇಟಿ  ನೀಡಿ ವೈದ್ಯರ ಜತೆ ಮಾತುಕತೆ ನಡೆಸಿದ್ದಾರೆ.

‘ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿರುವ ಸುದ್ದಿ ಕೇಳಿ ತುಂಬಾನೇ ಬೇಸರವಾಯಿತು. ಅವರು ಚೇತರಿಸಿಕೊಳ್ಳಲೆಂದು ನನ್ನ ಪ್ರಾರ್ಥನೆ’ ಎಂದು ಅನೇಕರು ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್​ ಅಭಿಮಾನಿಗಳು ಸೇರಿ ಸಾಕಷ್ಟು ಫ್ಯಾನ್ಸ್​ ಗ್ರೂಪ್​​ಗಳು ಸಂಚಾರಿ ವಿಜಯ್​ ಬೇಗ ಚೇತರಿಸಿಕೊಳ್ಳಲಿ ಎಂದು ಕೋರುತ್ತಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್​ ಓರ್ವ ಪ್ರತಿಭಾನ್ವಿತ ನಟ. 2014ರಲ್ಲಿ ಅವರ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ನಾನು ಅವನಲ್ಲ.. ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳು ಹೆಚ್ಚಾಗಿದ್ದವು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟರಲ್ಲೇ ಈ ಅಪಘಾತ ಸಂಭವಿಸಿರುವುದು ನೋವಿನ ಸಂಗತಿ.

ಇದನ್ನೂ ಓದಿ:

Sanchari Vijay: ನಟ ಸಂಚಾರಿ ವಿಜಯ್​​ಗೆ ಬೈಕ್ ಅಪಘಾತ; ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಯಾಂಡಲ್​ವುಡ್​ ಹೀರೋ 

Published On - 5:25 pm, Sun, 13 June 21