ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಜನರನ್ನು ಕೊರೊನಾ ವೈರಸ್ ಬಲಿ ತೆಗೆದುಕೊಂಡಿದೆ. ಇದರ ಅಟ್ಟಹಾಸ ಸದ್ಯಕ್ಕೆ ಮುಗಿಯುವ ರೀತಿಯಲ್ಲಿ ಕಾಣುತ್ತಿಲ್ಲ. ಈಗ ಕೊರೊನಾದಿಂದ ಪತ್ರಕರ್ತ, ಹಿರಿಯ ನಟ ಸುರೇಶ್ ಚಂದ್ರ ಅವರು ನಿಧನರಾಗಿದ್ದಾರೆ.
ಸುರೇಶ್ ಚಂದ್ರ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಕೆಲವು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸುರೇಶ್ ಚಂದ್ರ ಅವರು ಸಿನಿಮಾ ಪತ್ರಿಕೋದ್ಯಮದಲ್ಲಿದ್ದರು. ಹೀಗಾಗಿ, ಅವರಿಗೆ ಸ್ಟಾರ್ ನಟರ ಜತೆ ಒಡನಾಟ ಉತ್ತಮವಾಗಿತ್ತು. ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ನಟಿಸುವಂತೆ ನಿರ್ದೇಶಕ ಎಸ್. ನಾರಾಯಣ್ ಕೋರಿದ್ದರು. ಈ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿವರೆಗೆ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಸುರೇಶ್ ಚಂದ್ರ ನಟಿಸಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್ಗೆ ಬಲಿಯಾಗುತ್ತಲೇ ಇದ್ದಾರೆ. ಬಾಲಿವುಡ್ ನಟ ರಾಹುಲ್ ವೋಹ್ರಾ, ತೆಲುಗು ನಟ ಟಿಎನ್ಆರ್, ತಮಿಳು ನಟ ಪಾಂಡು, ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಪೋಸ್ಟರ್ ಡಿಸೈನರ್ ಮಸ್ತಾನ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.
ಇದನ್ನೂ ಓದಿ:
Koti Ramu: ಕೋಟಿ ರಾಮು ನಿಧನದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ಮಾಲಾಶ್ರೀ