
ನಟಿ ಸಂಜನಾ ಗಲ್ರಾನಿ (Sanjjana Galrani) ಅವರು ಸಿನಿಮಾ ಮೂಲಕ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆದರೆ, ಒಂದಿಲ್ಲಾ ಒಂದು ಕಾರಣಕ್ಕೆ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಈ ಮೊದಲು ವಂಚನೆಗೆ ಒಳಗಾದ ಪ್ರಕರಣ ಸುದ್ದಿ ಆಗಿತ್ತು. ರಾಹುಲ್ ತೋನ್ಸೆ ಇಂದ ವಂಚನೆ ಆಗಿದೆ ಎಂದು ಅವರು ದೂರಿದ್ದರು. ಈ ಪ್ರಕರಣದಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ. 61.50 ಲಕ್ಷ ರೂಪಾಯಿ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ನಟಿಗೆ ನ್ಯಾಯ ಸಿಕ್ಕಂತೆ ಆಗಿದೆ.
2018-19ರಲ್ಲಿ ನಡೆದ ಘಟನೆ ಇದಾಗಿದೆ. ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡೋದಾಗಿ ರಾಹುಲ್ ಆಮಿಷವೊಡ್ಡಿದ್ದ. ಆ ಬಳಿಕ ಗಲ್ರಾನಿಯಿಂದ ರಾಹುಲ್ 45 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ. ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ಹಾಗೂ ಆತನ ಕುಟುಂಬದ ವಿರುದ್ಧ ಸಂಜನಾ ದೂರು ದಾಖಲು ಮಾಡಿದ್ದರು. ಈ ದೂರನ್ನು ಆಧರಿಸಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಕೋರ್ಟ್ ವಿಚಾರಣೆಯಲ್ಲಿ ರಾಹುಲ್ ತೋನ್ಸೆ ಅಪರಾಧಿ ಎಂದು ಸಾಬೀತಾಗಿದೆ. ಹೀಗಾಗಿ, ಶಿಕ್ಷೆ ವಿಧಿಸಲಾಗಿದೆ.
ರಾಹುಲ್ ದೊಡ್ಡ ಉದ್ಯಮಿ. ರಾಹುಲ್ ಗೋವಾ ಹಾಗೂ ಕೊಲಂಬೋದಲ್ಲಿ ಕ್ಯಾಸಿನೊ ನಡೆಸುತ್ತಿದ್ದ. ಈ ಪ್ರಕರಣದಲ್ಲಿ ರಾಹುಲ್ ತಂದೆ ರಾಮಕೃಷ್ಣ, ತಾಯಿ ರಾಜೇಶ್ವರಿ ಕೂಡ ಶಾಮೀಲಾಗಿದ್ದರು ಎನ್ನಲಾಗಿತ್ತು. ಅವರ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಇದಲ್ಲದೆ, ಉದ್ಯಮಿಗೆ 25 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವೂ ಇವನ ಮೇಲೆ ಇದೆ.
ನಟಿ ಸಂಜನಾ ಅವರು 2021ರಲ್ಲಿ ವೈದ್ಯ ಅಜೀಜ್ ಪಾಶಾ ಅವರನ್ನು ವಿವಾಹ ಆದರು. ಅವರು ಮುಸ್ಲಿಂ ಧರ್ಮದವರನ್ನು ಮದುವೆ ಆದ ವಿಚಾರಕ್ಕೆ ಸಾಕಷ್ಟು ಟೀಕೆಗೆ ಒಳಗಾದರು. ಅಲ್ಲದೆ ಅವರು ಮಹಿರಾ ಎಂದು ಹೆಸರು ಬದಲಿಸಿಕೊಂಡಿದ್ದಕ್ಕೂ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಈ ದಂಪತಿಗೆ ಒಂದು ಮಗು ಇದೆ. ಮಗುವಿನ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಂಜನಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ರೂ ವಂಚನೆ: ರಾಹುಲ್ ತೋನ್ಸೆ ವಿರುದ್ಧ ಲುಕೌಟ್ ನೋಟಿಸ್
ಸಂಜನಾ ಗಲ್ರಾನಿ ಅವರ ಸಿನಿಮಾ ಜರ್ನಿ ವಿಚಾರಕ್ಕೆ ಬರೋದಾದರೆ 2006ರ ‘ಗಂಡ ಹೆಂಡತಿ’ ಸಿನಿಮಾ ಮೂಲಕ ಸಾಕಷ್ಟು ಫೇಮಸ್ ಆದರು. ಆ ಬಳಿಕ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದರು. ಈಗ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Mon, 7 April 25