
ಶ್ರೀನಗರ ಕಿಟ್ಟಿ, ರಚಿತಾ ರಾಮ್ (Rachita Ram) ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾದ ರಿಲೀಸ್ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದವು. ಆದ್ದರಿಂದ ಜನವರಿ 17ರಂದು ಗಡಿಬಿಡಿಯಲ್ಲಿ ಸಿನಿಮಾವನ್ನು ತೆರೆಕಾಣಿಸಲಾಗಿತ್ತು. ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ನೋಡಿದ ಪ್ರೇಕ್ಷಕರು ಕಂಟೆಂಟ್, ಹಾಡುಗಳು, ಅದ್ದೂರಿ ಮೇಕಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆದರೂ ಕೂಡ ಇನ್ನೂ ಚೆನ್ನಾಗಿ ಸಿನಿಮಾ ಮಾಡಬಹುದಿತ್ತು ಎಂಬ ಅಭಿಪ್ರಾಯ ಸಹ ಕೆಲವರಿಂದ ಕೇಳಿಬಂದಿತ್ತು. ಆ ಬಗ್ಗೆ ನಿರ್ದೇಶಕ ನಾಗಶೇಖರ್ ಅವರು ಗಮನ ಹರಿಸಿದರು. ಸಿನಿಮಾಗೆ ಹೊಸ ರೂಪ ನೀಡಲು ನಿರ್ಧರಿಸಿದರು.
ಜನವರಿ ತಿಂಗಳಲ್ಲಿ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆ ವೇಳೆ ಕೆಲವು ವಿಘ್ನಗಳು ಎದುರಾದ ಕಾರಣ ಎಲ್ಲವನ್ನೂ ಗಮನಿಸಲು ಚಿತ್ರತಂಡಕ್ಕೆ ಸಾಧ್ಯ ಆಗಿರಲಿಲ್ಲ. ಆದ್ದರಿಂದ ಮೂರೇ ದಿನದಲ್ಲಿ ಚಿತ್ರದ ಪ್ರದರ್ಶನವನ್ನು ಎಲ್ಲ ಕಡೆಗಳಲ್ಲಿ ನಿಲ್ಲಿಸಲಾಗಿತ್ತು. ಈಗ ಇದೇ ಸಿನಿಮಾಗೆ ಹೊಸದಾಗಿ 21 ನಿಮಿಷಗಳ ದೃಶ್ಯವನ್ನು ಮರು ಜೋಡಿಸಲಾಗಿದೆ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಹೊಸ ವರ್ಷನ್ ಜೂನ್ 6ರಂದು ರಿಲೀಸ್ ಆಗಲಿದೆ.
ಸಿನಿಮಾದ ಮರು ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಚಿತ್ರತಂಡದವರು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿದರು. ‘ಯಾವುದೇ ಸಿನಿಮಾ ತಂಡದವರು ನಮ್ಮ ಬಳಿ ಬಂದಾಗ ಸಂಪೂರ್ಣ ಸಹಕಾರ ನೀಡುತ್ತೇವೆ. ಸಂಜು ವೆಡ್ಸ್ ಗೀತಾ-2 ಸಿನಿಮಾದ ನಿರ್ಮಾಪಕರು ಜೂನ್ 6ಕ್ಕೆ ರಿಲೀಸ್ ಮಾಡಬೇಕು ಎಂದುಕೊಂಡಿದ್ದಾರೆ. ಇವರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸಿನಿಮಾಗೆ ಈಗ ಹೆಚ್ಚಿನ ದೃಶ್ಯಗಳನ್ನು ಸೇರಿಸಿದ್ದು ಮೊದಲಿಗಿಂತ ಉತ್ತಮವಾಗಿ ಸಿನಿಮಾ ಮೂಡಿಬಂದಿದೆ’ ಎಂದು ಅವರು ಹೇಳಿದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ‘ಬಿಡುಗಡೆಗೆ ಕೇವಲ ಮೂರು ದಿನ ಇರುವಾಗ ಸ್ಟೇ ತಂದಿದ್ದರಿಂದ ನಮಗೆ ಬಹಳ ತೊಂದರೆ ಆಯಿತು. ಎಲ್ಲ ಸೆಟಪ್ ಆಗಿದ್ದರಿಂದ ಸ್ಟೇ ವೆಕೇಟ್ ಮಾಡಿಸಿ ಸಿನಿಮಾ ಬಿಡುಗಡೆ ಮಾಡಲೇಬೇಕಿತ್ತು. ಬಳಿಕ ಮೂರು ದಿನದಲ್ಲಿ ಸಿನಿಮಾ ನಿಲ್ಲಿಸಿದೆವು. ಈಗ 20 ನಿಮಿಷಗಳ ಪ್ರಮುಖವಾದ ಹೃದಯಸ್ಪರ್ಶಿ ದೃಶ್ಯವನ್ನು ಸೇರಿಸಿ ರಿಲೀಸ್ ಮಾಡುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ಇದು ಬರೀ ಸಿನಿಮಾ ಹಾಡಲ್ಲ, ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ನಾಗಶೇಖರ್ ಅವರು ಕೂಡ ಸಿನಿಮಾ ಬಗ್ಗೆ ಮಾತನಾಡಿದರು. ‘ಸ್ಟೇ ತಂದಿದ್ದರಿಂದ ನಿರ್ಮಾಪಕರು ಸಂಬಂಧವಿಲ್ಲದ ವಿಷಯಕ್ಕೆ ತೊಂದರೆ ಅನುಭವಿಸಬೇಕಾಯಿತು. 21 ನಿಮಿಷಗಳ ಸಿಜಿ ಪ್ಲ್ಯಾನ್ ಆಗಿತ್ತು. ಅದೇ ಚಿತ್ರದ ಹೃದಯಸ್ಪರ್ಶಿ ಭಾಗ. ಅದೇ ಇಲ್ಲದೆ ಸಿನಿಮಾ ಬಿಡುಗಡೆ ಆಗಿತ್ತು. ಈಗ 21 ನಿಮಿಷ ಸೇರಿಸಿ ಎಸ್. ಮಹೇಂದರ್ ಅವರಿಗೆ ತೋರಿಸಿದೆವು. ಬಹಳ ಚೆನ್ನಾಗಿದೆ ಎಂದು ಅವರು ಹೊಗಳಿದರು. ಎಸ್. ನಾರಾಯಣ್, ಎಪಿ. ಅರ್ಜುನ್ ಸೇರಿದಂತೆ 22 ನಿರ್ದೇಶಕರಿಗೆ ಸಿನಿಮಾ ತೋರಿಸುತ್ತಿದ್ದೇವೆ’ ಎಂದು ನಾಗಶೇಖರ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.