ಕೆಲವೇ ತಿಂಗಳ ಹಿಂದೆ ‘ಸತ್ಯಂ’ ಸಿನಿಮಾ (Sathyam Kannada Movie) ಟೀಸರ್ ಬಿಡುಗಡೆ ಆಗಿತ್ತು. ಆ ಟೀಸರ್ಗೆ 10 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. ಸಂತೋಷ್ ಬಾಲರಾಜ್ (Santhosh Balaraj) ನಟನೆಯ ‘ಸತ್ಯಂ’ ಸಿನಿಮಾಗೆ ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅವರು ಒಂದು ಭಿನ್ನವಾದ ಕಹಾನಿ ತೋರಿಸಲಿದ್ದಾರೆ. ಟೀಸರ್ ನೋಡಿದ ಎಲ್ಲರಿಗೂ ಕೌತುಕ ಮೂಡಿದೆ. ಈಗ ಈ ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ‘ಸತ್ಯಂ’ ಸಿನಿಮಾಗೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಸಿನಿಮಾಗೆ ಮಹಾಂತೇಶ್ ವಿ.ಕೆ. ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಂಜನಿ ರಾಘವನ್ (Ranjani Raghavan) ನಟಿಸಿದ್ದಾರೆ.
ನಟ ಸಂತೋಷ್ ಬಾಲರಾಜ್ ಅವರು ‘ಗಣಪ’ ಸಿನಿಮಾದಲ್ಲಿ ನಟಿಸಿ ಭರವಸೆ ಮೂಡಿಸಿದ್ದರು. ಅದು ಅವರ ಮೊದಲ ಸಿನಿಮಾ. ಎರಡನೇ ಸಿನಿಮಾ ‘ಕರಿಯ 2’ ಕೂಡ ಗಮನ ಸೆಳೆದಿತ್ತು. ಈಗ ಅವರು ನಟಿಸಿದ ಮೂರನೇ ಚಿತ್ರವಾಗಿ ‘ಸತ್ಯಂ’ ಸಿನಿಮಾ ಮೂಡಿಬಂದಿದೆ. ‘ರಂಗಿತರಂಗ’, ‘ಕಾಂತಾರ’ ಮುಂತಾದ ಸಿನಿಮಾಗಳಲ್ಲಿ ತುಳುನಾಡಿನ ದೈವಾರಾಧನೆ ಕುರಿತು ಕಥೆಯಿತ್ತು. ಆ ಭಾಗದ ಸೊಗಡಿನ ಕಥೆಯನ್ನೇ ಇಟ್ಟುಕೊಂಡು ಈಗ ‘ಸತ್ಯಂ’ ಕೂಡ ಸಿದ್ಧವಾಗಿದೆ. ಹಾಗಂತ ಈ ಸಿನಿಮಾಗೆ ‘ಕಾಂತಾರ’ ಪ್ರೇರಣೆ ಅಲ್ಲ. ಯಾಕೆಂದರೆ, ‘ಕಾಂತಾರ’ಗಿಂತ ಮೊದಲೇ ‘ಸತ್ಯಂ’ ಕಥೆ ಸಿದ್ಧವಾಗಿತ್ತು ಎಂದು ಚಿತ್ರತಂಡದವರು ಹೇಳಿದ್ದಾರೆ.
‘ಸತ್ಯಂ’ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ. ಅದು ಚಿತ್ರತಂಡಕ್ಕೆ ಖುಷಿ ನೀದಿದೆ. ಯಾವುದೇ ಕಟ್ ನೀಡದೇ ‘ಯು/ಎ’ ಪ್ರಮಾಣಪತ್ರ ಕೊಡಲಾಗಿದೆ. ಈ ಸಿನಿಮಾದಲ್ಲಿ ಮಾಸ್ ಅಂಶಗಳು ಇವೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಟೀಸರ್ಗೆ ಸಿನಿಪ್ರಿಯರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಆರಾಧನೆಯ ಕಹಾನಿ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ. ಅದರ ಸುತ್ತ ರೋಚಕವಾದ ಮತ್ತು ಸುಲಭದಲ್ಲಿ ಊಹಿಸಲು ಸಾಧ್ಯವಾಗದ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುವುದು ಎಂದು ಹೇಳುವ ಮೂಲಕ ಚಿತ್ರತಂಡದವರು ಕೌತಕ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ‘ಕೊರಗಜ್ಜ’ ಚಿತ್ರದ ಫಸ್ಟ್ಲುಕ್ ಬಿಡುಗಡೆಗೆ ದೈವದಿಂದಲೇ ಸಿಕ್ತು ಅನುಮತಿ
‘ಶ್ರೀಮಾತಾ ಕ್ರಿಯೇಷನ್ಸ್’ ಮೂಲಕ ‘ಸತ್ಯಂ’ ಸಿನಿಮಾ ನಿರ್ಮಾಣ ಆಗಿದೆ. ಕುಟುಂಬ ಸಮೇತರಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟ ಆಗಲಿದೆ ಎಂಬುದು ತಂಡದ ಭರವಸೆ. ರವಿ ಬಸ್ರೂರು ಅವರು ‘ಸತ್ಯಂ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ ಮಾಡಿದ್ದಾರೆ. ಸಂತೋಷ್ ಬಾಲರಾಜ್, ರಂಜಿನಿ ರಾಘವನ್ ಜೊತೆ ಸುಮನ್, ಪವಿತ್ರಾ ಲೋಕೇಶ್, ಸೈಯಾಜಿ ಶಿಂಧೆ, ಅವಿನಾಶ್, ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಸಾದ್, ಎಂ.ಎನ್. ಲಕ್ಷ್ಮಿದೇವಿ, ತನುಶ್ರೀ, ಶೃಂಗೇರಿ ರಾಮಣ್ಣ, ಎಂ.ಎಸ್. ಉಮೇಶ್, ಮೀನಾಕ್ಷಿ, ಬಸವರಾಜ್ ಕಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.