ಹೊಸ ವರ್ಷಕ್ಕೆ ಬಂತು ‘ಮ್ಯಾಟ್ನಿ’ ಸಿನಿಮಾದ ಪಾರ್ಟಿ ಹಾಡು

Party Song: ನೀನಾಸಂ ಸತೀಶ್ ನಟನೆಯ ಹೊಸ ಸಿನಿಮಾದ ಹೊಸ ಪಾರ್ಟಿ ಹಾಡೊಂದು ಬಿಡುಗಡೆ ಆಗಿದೆ.

ಹೊಸ ವರ್ಷಕ್ಕೆ ಬಂತು ‘ಮ್ಯಾಟ್ನಿ’ ಸಿನಿಮಾದ ಪಾರ್ಟಿ ಹಾಡು
Follow us
ಮಂಜುನಾಥ ಸಿ.
|

Updated on: Dec 31, 2023 | 9:07 PM

ಹೊಸ ವರ್ಷಕ್ಕೆ (New Year) ಎರಡು ಹೊಸ ಪಾರ್ಟಿ ಹಾಡುಗಳು ಕನ್ನಡದಲ್ಲಿ ಬಿಡುಗಡೆ ಆಗಿವೆ. ಯೋಗಿ, ದಿಗಂತ್, ಅಚ್ಯುತ್ ಕುಮಾರ್ ನಟನೆಯ ‘ಬ್ಯಾಚುಲರ್ಸ್ ಪಾರ್ಟಿ’ ಸಿನಿಮಾದ ಪಾರ್ಟಿ ಹಾಡೊಂದು ಬಿಡುಗಡೆ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅದರ ಬೆನ್ನಲ್ಲೆ ಇದೀಗ ನೀನಾಸಂ ಸತೀಶ್ ನಟನೆಯ ಹೊಸ ಸಿನಿಮಾದ ಹೊಸ ಪಾರ್ಟಿ ಹಾಡೊಂದು ಬಿಡುಗಡೆ ಆಗಿದೆ.

ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಹಿಟ್ ನೀಡಿದ್ದರು. ಅದಾದ ಬಳಿಕ ಇದೀಗ ‘ಮ್ಯಾಟ್ನಿ’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಈ ಸಿನಿಮಾದ “ಬಾರೋ ಬಾರೋ ಬಾಟಲ್ ತಾರೋ” ಎಂಬ ಹಾಡೊಂದು ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ನೀನಾಸಂ ಸತೀಶ್​ರ ಗೆಳೆಯ ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ.

ಯುವಪೀಳಿಗೆಯ ಕೇಳುಗರನ್ನು ಸೆಳೆಯುವ ಉದ್ದೇಶದಿಂದ ಕ್ಯಾಚಿ ಲೈನುಗಳನ್ನು ಬಳಸಿಕೊಂಡು ರಚಿಸಿರುವ ಪಾರ್ಟಿ ಹಾಡಿದು. ಹಾಡಿನಲ್ಲಿ ಕುಡಿತದ ಬಗ್ಗೆ ಪಾರ್ಟಿ ಬಗ್ಗೆ ಸಾಲುಗಳಿವೆ. ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ, ಮೈಸೂರು ಪೂರ್ಣ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ:‘ಮ್ಯಾಟ್ನಿ’ ಸಿನಿಮಾ ಹಾಡಿನ ಶೂಟಿಂಗ್​ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್; ಹೇಗಿದೆ ನೋಡಿ ಸಾಂಗ್ ಶೂಟ್

ಹಾಡಿನ ಚಿತ್ರೀಕರಣವನ್ನು ಸಹ ಸ್ಟೈಲಿಷ್ ಆಗಿ ಮಾಡಲಾಗಿದೆ. ಪಬ್ ಒಂದರಲ್ಲಿ ಪಾರ್ಟಿ ಯುವಕರು ಪಾರ್ಟಿ ಮಾಡುತ್ತಿರುವ ರೀತಿಯಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ‘ಬಾರೋ ಬಾರೋ ಬರುವಾಗ ಬಾಟ್ಲಿ ತಾರೋ’ ಎಂಬ ಸಾಲುಗಳ ಮೂಲಕ ಆರಂಭವಾಗುವ ಈ ಹಾಡು, ಗೆಳೆಯರನ್ನು ಎಣ್ಣೆ ಪಾರ್ಟಿಗೆ ಕರೆಯುವ ಮೂಡನ್ನು ಒಳಗೊಂಡಿದೆ.

F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಮನೋಹರ್ ಕಾಂಪಲ್ಲಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಮ್ಯಾಟ್ನಿ” ಸಿನಿಮಾಕ್ಕಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ