ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಸಾಯುವುದಕ್ಕೂ ಮೊದಲು ಸವಿ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಪೋಸ್ಟ್ಗಳನ್ನು ಮಾಡಿದ್ದಾರೆ. ಜತೆಗೆ ಅವರು ಆಪ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸವಿ ಮಾದಪ್ಪ ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು. ಊಟ ತರುವಂತೆ ವಿವೇಕ್ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ (ಸೆಪ್ಟೆಂಬರ್ 29) ಸವಿ ಅವರು ಕೆಲವು ಪೋಸ್ಟ್ಗಳನ್ನು ಹಾಕಿದ್ದರು.
‘ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ’ ಎಂದು ಸವಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ತಮ್ಮದೇ ಫೋಟೋ ಹಾಕಿ ‘happiness, Sadness, ’ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದರ ಜತೆಗೆ ಗೆಳೆಯರು ಹಾಗೂ ಸಹೋದರರ ಫೋಟೋ ಹಾಕಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಸವಿ ಮಾದಪ್ಪ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರು. ‘ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ‘ನಿಮ್ಮ ಜೀವನದ ಬಗ್ಗೆ ಹಾಗೂ ಗುರಿ ಬಗ್ಗೆ ಹೆಚ್ಚು ಫೋಕಸ್ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2019ರಲ್ಲಿ ಚೌಕಟ್ಟು ಸಿನಿಮಾ ಸೆಟ್ಟೇರಿತ್ತು. ಇದು ಅವರ ಮೊದಲ ಸಿನಿಮಾ. ಈ ಬಗ್ಗೆ ಮಾತನಾಡಿದ್ದ ಅವರು, ‘ನಟಿಯಾಗಿ ನನಗೆ ಹಲವು ಕನಸುಗಳಿವೆ. ಸಿಕ್ಕ ಪಾತ್ರಗಳನ್ನು ಮಾಡುವುದಕ್ಕಿಂತ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ಚೌಕಟ್ಟು ಸಿನಿಮಾದಲ್ಲಿನನಗೆ ಅಂಥದ್ದೊಂದು ಪಾತ್ರ ಸಿಕ್ಕಿದೆ. ಇಂತಹ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿರುವುದು ಸಹಜವಾಗಿಯೇ ಖುಷಿ ಆಗಿದೆ. ನನಗೆ ಸಿನಿಮಾಟೋಗ್ರಾಫಿಯಲ್ಲೂ ಕಾಣಿಸಿಕೊಳ್ಳುವ ಕನಸಿದೆ’ ಎಂದಿದ್ದರು ಅವರು. ಆದರೆ, ಅದೆಲ್ಲವೂ ಈಗ ನಾಶವಾಗಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣು
Published On - 2:28 pm, Thu, 30 September 21