‘ಸೀತಾ ರಾಮ’ ಧಾರಾವಾಹಿಯ ಟಿಆರ್ಪಿ ಇತ್ತೀಚೆಗೆ ಸ್ವಲ್ಪ ತಗ್ಗಿದೆ ಎನ್ನಬಹುದು. ಈ ರೀತಿ ಆದಾಗ ವಾಹಿನಿಯವರು ಧಾರಾವಾಹಿಗೆ ಬೇರೆ ಸ್ಲಾಟ್ ಕೊಟ್ಟ ಉದಾಹರಣೆ ಸಾಕಷ್ಟು ಇದೆ. ಈಗ ‘ಸೀತಾ ರಾಮ’ ಧಾರಾವಾಹಿಗೂ ಹಾಗೆಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. ಮಗಳು ಸಿಹಿಯನ್ನು ಕಳೆದುಕೊಂಡ ನೋವಲ್ಲಿರುವ ಸೀತಾಗೆ ಮತ್ತೆ ಮಗಳು ಸಿಕ್ಕಳು ಎನ್ನುವಾಗಲೇ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಆಗಿದೆ.
‘ಸೀತಾ ರಾಮ’ ಧಾರಾವಾಹಿ ಈ ಮೊದಲು ಜೀ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿತ್ತು. ಆದರೆ, ಇನ್ನುಮುಂದೆ ಧಾರಾವಾಹಿ ಈ ಸಮಯದಲ್ಲಿ ಪ್ರಸಾರ ಕಾಣುವುದಿಲ್ಲ. ಹೌದು, ಜನವರಿ 27ರಿಂದ ಈ ಧಾರಾವಾಹಿಯ ಸಮಯ ಬದಲಾಗಿದೆ. ಇನ್ನುಮುಂದೆ ಧಾರಾವಾಹಿ ಸಂಜೆ 7.30ಕ್ಕೆ ಪ್ರಸಾರ ಕಾಣಲಿದೆಯಂತೆ. ಇದು ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
‘ಸೀತಾ ರಾಮ’ ಧಾರಾವಾಹಿ ಅಭಿಮಾನಿ ಬಳಗ ದೊಡ್ಡದಿದೆ. ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರ ಮಾಡಿದರೆ ಯಾರೂ ಅದನ್ನು ನೋಡುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಲೇ ಮೊದಲಿನ ಸಮಯಕ್ಕೆ ಧಾರಾವಾಹಿ ಪ್ರಸಾರ ಮಾಡಿ ಎಂಬ ಆಗ್ರಹ ವ್ಯಕ್ತವಾಗಿದೆ.
ಸಿಹಿಯನ್ನು (ರೀತು ಸಿಂಗ್) ಅಪಘಾತದಲ್ಲಿ ಭಾರ್ಗವಿ (ಪೂಜಾ ಲೋಕೇಶ್) ಸಾಯಿಸಿದ್ದಾಳೆ. ಇದು ಶಾಕಿಂಗ್ ಎನಿಸಿತ್ತು. ಆ ಬಳಿಕ ಸಿಹಿ ತಾಯಿ ಸೀತಾಗೆ (ವೈಷ್ಣವಿ ಗೌಡ) ಸಾಕಷ್ಟು ನೋವಾಗಿದೆ. ಆಕೆ ಹುಚ್ಚಿ ಆಗುವ ಹಂತಕ್ಕೆ ಬಂದಿದ್ದಾಳೆ. ಹೀಗಿರುವಾಗಲೇ ಬೇರೆ ಹುಡುಗಿಯನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಮಾಡಲಾಗುತ್ತಿದೆ. ಸಿಹಿಯ ಟ್ವಿನ್ ಸುಬ್ಬಿಯ ಈ ಸಂದರ್ಭದಲ್ಲೇ ಧಾರಾವಾಹಿ ಸಮಯ ಬದಲಿಸಲಾಗಿದೆ. ಇನ್ನು, ಧಾರಾವಾಹಿಯಲ್ಲಿ ನೀಡಲಾಗುತ್ತಿರುವ ಟ್ವಿಸ್ಟ್ಗಳನ್ನು ಕೂಡ ವೀಕ್ಷಕರು ಹೆಚ್ಚು ಇಷ್ಟಪಡುತ್ತಿಲ್ಲ.
‘ಸೀತಾ ರಾಮ’ ಧಾರಾವಾಹಿ 2023ರ ಜುಲೈನಲ್ಲಿ ಪ್ರಸಾರ ಆರಂಭಿಸಿತು. ಈವರೆಗೆ ಧಾರಾವಾಹಿ 350 ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಸಪ್ನಾ ಕೃಷ್ಣ ಅವರು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಾ ಇದ್ದಾರೆ. ಇದು ಮರಾಠಿ ಧಾರಾವಾಹಿಯ ರಿಮೇಕ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ