ಹಿರಿಯ ಕಲಾವಿದ ಶಿವರಾಂ (Senior actor Shivaram) ಅವರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗಕ್ಕೆ ಬೇಸರ ಆಗಿದೆ. ಬೆಂಗಳೂರಿನ ಬ್ಯಾಂಕ್ ಕಾಲೋನಿಯಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಶಿವರಾಂ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ವೈದ್ಯರಿಂದ ಶಿವರಾಂ ಅವರ ಹೆಲ್ತ್ ಅಪ್ಡೇಟ್ (Shivaram Health Update) ಸಿಕ್ಕಿದೆ. ಸದ್ಯ ಅವರ ಆರೋಗ್ಯ ಇನ್ನಷ್ಟು ಗಂಭೀರ ಪರಿಸ್ಥಿತಿ ತಲುಪಿದೆ. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಕೋಮಾ ಹಂತ ತಲುಪಿದ್ದಾರೆ. ಇದು ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
‘ಶಿವರಾಂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಇಂದು (ಡಿ.3) ನುರಿತ ವೈದ್ಯರು ಪರೀಕ್ಷೆ ಮಾಡಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಬ್ರೇನ್ ಡ್ಯಾಮೇಜ್ ಆಗಿದ್ದು, ಈಗಾಗಲೇ ಅವರು ಕೋಮಾ ಸ್ಥಿತಿ ತಲುಪಿದ್ದಾರೆ. ಅವರ ಆರೋಗ್ಯದ ವಿಚಾರದಲ್ಲಿ ಮಿರಾಕಲ್ ಆಗಬೇಕು’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇಂದು ಕೂಡ ಶಿವರಾಂ ಅವರನ್ನು ನೋಡಲು ಅನೇಕ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ.
84 ವರ್ಷದ ಶಿವರಾಂ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಆಗಿದ್ದು ಯಾಕೆ ಎಂಬುದನ್ನು ಪ್ರಶಾಂತ್ ಆಸ್ಪತ್ರೆ ವೈದ್ಯ ಮೋಹನ್ ಅವರು ಗುರುವಾರ (ಡಿ.2) ವಿವರಿಸಿದ್ದರು. ‘ಶಿವರಾಂ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಟೆರೆಸ್ನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು. ಒಂದೂವರೆ ಗಂಟೆ ಬಳಿಕ ಅದು ತಿಳಿದುಬಂದಿದೆ. ಅವರ ಮಗ ಮತ್ತು ಮೊಮ್ಮಗಳು ಆಸ್ಪತ್ರೆಗೆ ಕರೆದುಕೊಂಡು ಬಂದರು. ಎಂಆರ್ಐ ಸ್ಕ್ಯಾನ್ ಮಾಡಿದಾಗ ತಲೆ ಒಳಗೆ ಪೆಟ್ಟು ಬಿದ್ದಿರುವುದು ತಿಳಿಯಿತು’ ಎಂದು ಡಾ. ಮೋಹನ್ ಹೇಳಿದ್ದರು.
ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ 6 ದಶಕಗಳಿಗೂ ಹೆಚ್ಚು.
ಇದನ್ನೂ ಓದಿ:
S.Shivaram: ನಟ ಶಿವರಾಂ ಚೇತರಿಸಿಕೊಳ್ಳುವಂತೆ ದೇವರಲ್ಲಿ ಮೊರೆಯಿಟ್ಟ ಚಿತ್ರರಂಗ; ಆಸ್ಪತ್ರೆಗೆ ಹಿರಿಯ ಕಲಾವಿದರ ಭೇಟಿ
Actor Shivaram: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ; ಐಸಿಯುವಿನಲ್ಲಿ ಚಿಕಿತ್ಸೆ