ನಟಿ ಲೀಲಾವತಿಯ ಕಾಣ ಬಂದ ಕಲಾ ಕುಟುಂಬದ ಬಂಧುಗಳು, ಹಿರಿ ಜೀವಕ್ಕೆ ತಂಪೆರದ ಕಲಾವಿದರು
Leelavathi: ಗಾಂಧಿ ನಗರಕ್ಕೆ ಹೃದಯವಿಲ್ಲ ಎಂಬ ಮಾತಿದೆ ಆದರೆ ಇಂದು ಆ ಮಾತನ್ನು ಸುಳ್ಳು ಮಾಡಿದ್ದಾರೆ ಗಾಂಧಿ ನಗರದ ಹಿರಿಯ ಕಲಾವಿದರು. ತಮ್ಮದೇ ಕುಟುಂಬದ ಹಿರಿ ಜೀವದ ಮನ ತಂಪಾಗುವಂತೆ ಮಾಡಿದ್ದಾರೆ.
ಗಾಂಧಿ ನಗರಕ್ಕೆ (Gandhi Nagara) ಹೃದಯವಿಲ್ಲ, ಕಣ್ಣಿಲ್ಲ, ಹಣದ ಝಣ-ಝಣ ಕೇಳಿಸಿಕೊಳ್ಳುವ ಕಿವಿ ಮಾತ್ರವೇ ಇದೆ ಎಂಬ ಮಾತುಗಳಿವೆ. ಇರಬಹುದೇನೋ, ಆದರೆ ಗಾಂಧಿ ನಗರದ ಕಲಾವಿದರಿಗೆ ಅದರಲ್ಲಿಯೂ ಹಿರಿಯ ಕಲಾವಿದರಿಗೆ ಹೃದಯವಿದೆ, ಅದು ತಮ್ಮವರಿಗಾಗಿ ಮಿಡಿಯುತ್ತದೆ, ತುಡಿಯುತ್ತದೆ ಎಂಬುದನ್ನು ಇಂದು ಕನ್ನಡ ಚಿತ್ರರಂಗದ ಕಲಾವಿದರು ಸಾಬೀತುಪಡಿಸಿದ್ದಾರೆ. ಚಿತ್ರರಂಗದಿಂದ ದೂರಾಗಿ ಮಗನೊಡನೆ ಒಂಟಿ ಜೀವನ ನಡೆಸುತ್ತಾ ಬಹುಪಾಲು ಸಮಯ ಹಾಸಿಗೆಯಲ್ಲಿಯೇ ಕಳೆಯುತ್ತಿರುವ ನಟಿ ಲೀಲಾವತಿಯವರನ್ನು (Leelavathi) ಅರಸಿ ಇಂದು ದೊಡ್ಡ ಸಂಖ್ಯೆಯ ಕಲಾವಿದರ ದಂಡು ಹೋಗಿತ್ತು. ಲೀಲಾವತಿಯವರನ್ನು ದೊಡ್ಡ ಖುರ್ಚಿಯ ಮೇಲೆ ಕೂರಿಸಿ ಅವರೆದರು ಹಾಡಿ, ಕುಣಿದು ಅವರ ಮನಸಂತೋಷ ಪಡಿಸಿದರು. ತನ್ನ ಕಲಾಕುಟುಂಬದ ಬಂಧುಗಳು ತಮಗಾಗಿ ಬಂದಿದ್ದನ್ನು ಕಂಡು ಹಿರಿ ಜೀವದ ಮನಸ್ಸು ತಂಪಾಯಿತು.
ಮಹಿಳಾ ದಿನದ ಅಂಗವಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಹಿರಿಯ ನಟಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ಅವರು ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಹೀಗಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಅವರ ತೋಟದ ಮನೆಗೆ ಭೇಟಿ ನೀಡಿ ಹಿರಿಯ ನಟಿಯನ್ನು ಕನ್ನಡ ಕಲಾಬಳಗ ಸನ್ಮಾನ ಮಾಡುವ ಕಾರ್ಯಕ್ರಮ ಇಂದು ನೆರವೇರಿತು. ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರು ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ ಮಾಡಿ ಹಿರಿಯ ಚೇತನವನ್ನು ಗೌರವಿಸಿದ್ದಾರೆ.
ಐವತ್ತಕ್ಕೂ ಹೆಚ್ಚು ಮಂದಿ ಕಲಾವಿದರು ಲೀಲಾವತಿ ಅವರ ಮನೆಗೆ ಆಗಮಿಸಿದ್ದರು. ಹಿರಿಯ ನಟರಾದ ಶ್ರೀಧರ್, ದೊಡ್ಡಣ್ಣ, ಸುಂದರ್ ರಾಜ್, ಜೈಜಗದೀಶ್, ಹಿರಿಯ ನಟ ಗಿರಿಜಾ ಲೋಕೇಶ್, ಪದ್ಮಾವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾಗಾಂಧಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಹಾಗೂ ಮಂಡಳಿ ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ನಟ ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು. ನಟ ನಟಿಯರನ್ನು ಬರಮಾಡಿಕೊಂಡ ಲೀಲಾವತಿ ಅವರ ಮಗ ವಿನೋದ್ ರಾಜ್ ಕಲಾವಿದರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಲೀಲಾವತಿ ಅವರ ಸಿನಿಮಾಗಳ ಹಾಡುಗಳ, ನೃತ್ಯ ಕಾರ್ಯಕ್ರಮಗಳು ನಡೆದವು. ಹಿರಿಯ ಕಲಾವಿದರು ಹಿರಿತನ ಮರೆತು ಹಿರಿ ಜೀವವನ್ನು ತಮ್ಮ ಪ್ರತಿಭೆಯ ಮೂಲಕ ರಂಜಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ಸುಂದರ್ ರಾಜ್, ‘ಅಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ’ ಕಾರ್ಯಕ್ರಮವನ್ನು ಇಂದು ಲೀಲಮ್ಮನವರ ಮನೆಯಲ್ಲಿ ಮಾಡಿದ್ದೇವೆ. ಈ ಹಿಂದೆ ಅವರಿಗೆ ಆರೋಗ್ಯದಲ್ಲಿ ವ್ಯತ್ಯಯವಾದಾಗ ಬಂದು ಮಾತನಾಡಿದ್ದೆವು ಆಗ ಬೇಸರವಾಗಿತ್ತು. ಆದರೆ ಅವರಲ್ಲಿ ಉತ್ಸಾಹ ಹಾಗೆಯೇ ಇತ್ತು. ಆಗಲೇ ನಾವು ಹಾಡುವುದನ್ನು ಕೇಳಿ ಮಲಗಿಕೊಂಡೆ ಡ್ಯಾನ್ಸ್ ಮಾಡುತ್ತಿದ್ದರು. ಅಂದು ನಮ್ಮೊಡನೆ ಮಾತನಾಡುತ್ತಾ, ನಾನು ನಮ್ಮ ಕಲಾವಿದರನ್ನು ನೋಡಬೇಕು, ಅನ್ನ ಹಾಕಿದ ನಿರ್ಮಾಪಕರನ್ನು, ಪಾತ್ರಗಳನ್ನು ನೀಡಿದ ನಿರ್ದೇಶಕರನ್ನು ನೋಡಬೇಕು ಎಂದಿದ್ದರು. ಹಾಗಾಗಿ ಈಗ ನಾವೆಲ್ಲರೂ ಬಂದಿದ್ದೇವೆ. ನಾವೆಲ್ಲರೂ ಇಲ್ಲಿ ಸೇರಿರುವುದು ಉದ್ಯಮ ಒಂದು ಎಂಬುದನ್ನು ತೋರಿಸುತ್ತಿದೆ” ಎಂದ ಸುಂದರ್ ರಾಜ್, ಹಿಂದಿಯ ದೀವಾರ್ ಸಿನಿಮಾದ ಮೇರೆ ಪಾಸ್ ಮಾ ಹೇ ಡೈಲಾಗ್ ಹೇಳಿ ಆ ಸಂಭಾಷಣೆ ವಿನೋದ್ ರಾಜ್ ಗೆ ಸರಿಯಾಗಿ ಒಪ್ಪುತ್ತದೆ. ಎಲ್ಲವನ್ನೂ ಬಿಟ್ಟು ಅಮ್ಮನಿಗಾಗಿ ಮಾತ್ರವೇ ಬಾಳುತ್ತಿದ್ದಾರೆ. ಕಲ್ಲು ಕಾಡಾಗಿದ್ದ ಈ ಜಾಗವನ್ನು ನಂದನವನವನ್ನಾಗಿ ಮಾಡಿದ್ದಾರೆ. ಎಲ್ಲರೂ ವಿನೋದ್ ರಾಜ್ ಅವರನ್ನು ನೋಡಿ ಕಲಿಯಬೇಕು ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ