
ನಟ ಶೈನ್ ಶೆಟ್ಟಿ (Shine Shetty) ಅವರು ಆರು ವರ್ಷಗಳ ಹಿಂದೆ ‘ಗಲ್ಲಿ ಕಿಚನ್’ (Galli Kitchen) ಹೆಸರಿನ ಫುಡ್ ಟ್ರಕ್ ಆರಂಭಿಸಿದ್ದರು. ಆ ಬಳಿಕ ಇದೇ ಹೆಸರಲ್ಲಿ ಅವರು ಹೋಟೆಲ್ ಕೂಡ ಆರಂಭಿಸಿದರು. ಆದರೆ, ಈಗ ‘ಗಲ್ಲಿ ಕಿಚನ್’ ಪಯಣಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಹಿಂದೆ ಸಾಕಷ್ಟು ಚಾಲೆಂಜ್ಗಳು ಇವೆ ಎಂದು ಶೈನ್ ಶೆಟ್ಟಿ ಅವರು ‘ಟಿವಿ9 ಕನ್ನಡ ಡಿಜಿಟಲ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
‘ಗಲ್ಲಿ ಕಿಚನ್’ ಶೈನ್ ಶೆಟ್ಟಿ ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ. ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಇದು ತಂದಿದೆ. ಈಗ ಅದನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಶೈನ್ ಶೆಟ್ಟಿ ಬಂದಿದ್ದಾರೆ. ಶೈನ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಈ ರೀತಿಯ ಹೋಟೆಲ್ ಉದ್ಯಮ ನಡೆಸುವಾಗ ಗಮನ ಸಂಪೂರ್ಣವಾಗಿ ಅಲ್ಲಿಯೇ ಇರಬೇಕು. ಅದು ಸಾಧ್ಯವಾಗದೇ ಇರದ ಕಾರಣಕ್ಕೆ ಅವರು ‘ಗಲ್ಲಿ ಕಿಚನ್’ ಕೊನೆ ಗೊಳಿಸುತ್ತಿದ್ದಾರೆ.
‘ಹೋಟೆಲ್ ಉದ್ಯಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಾವೇ ಅಲ್ಲಿ ಇಲ್ಲದೆ ಅದನ್ನು ನಡೆಸೋದು ಬಹಳ ಕಷ್ಟ. ನಮ್ಮ ಪರವಾಗಿ ಇನ್ನೊಬ್ಬರು ನಡೆಸಬೇಕು ಎಂದರೆ ಅವರು ನಮ್ಮ ರೀತಿಯೇ ನಡೆಸುತ್ತಾರೆ ಎನ್ನುವ ನಂಬಿಕೆ ಇರೋದಿಲ್ಲ. ನಾನೇ ಅಲ್ಲಿ ತೊಡಗಿಸಿಕೊಳ್ಳೋಣ ಎಂದರೆ ಸಿನಿಮಾ ಕೆಲಸ. ಇಷ್ಟು ವರ್ಷ ಸಾಕಷ್ಟು ಚಾಲೆಂಜ್ಗಳನ್ನು ಎದುರಿಸಿ ಇಲ್ಲಿಯವರೆಗೆ ಬಂದೆವು. ಈಗ ಪಯಣ ಕೊನೆ ಮಾಡುವ ಸಮಯ’ ಎಂದಿದ್ದಾರೆ ಶೈನ್ ಶೆಟ್ಟಿ.
ಸದ್ಯ ಶೈನ್ ಶೆಟ್ಟ ನಟನೆಯ ‘ಜಸ್ಟ್ ಮ್ಯಾರೀಡ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇನ್ನೂ ಕೆಲವು ಚಿತ್ರಗಳು ಅವರ ಕೈಯಲ್ಲಿದ್ದು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇವುಗಳ ಮಧ್ಯೆ ಹೋಟೆಲ್ ಉದ್ಯಮಕ್ಕೆ ಸಮಯ ನೀಡಬೇಕು, ಅದನ್ನು ಉತ್ತಮ ರೀತಿಯಲ್ಲಿ ನಡೆಸಬೇಕು ಎಂದರೆ ಅದು ದೊಡ್ಡ ಚಾಲೆಂಜ್ ಅನ್ನೋದು ಶೈನ್ ಶೆಟ್ಟಿ ಅಭಿಪ್ರಾಯ.
ಇದನ್ನೂ ಓದಿ: ಗಲ್ಲಿ ಕಿಚನ್ ಪಯಣಕ್ಕೆ ವಿದಾಯ; ಶೈನ್ ಶೆಟ್ಟಿ ಭಾವುಕ ಪೋಸ್ಟ್
‘ಆರು ವರ್ಷಗಳಕಾಲ ನಡೆದ ಉದ್ಯಮ. ಇದನ್ನು ಕೊನೆ ಮಾಡಬೇಕು ಎಂದಾಗ ಕಷ್ಟ ಆಗುತ್ತದೆ. ನಮ್ಮ ಜೀವನ ಚೆನ್ನಾಗಿ ನಡೆದುಕೊಂಡು ಹೋಗುವಂತೆ ಮಾಡಿ ಸಾಥ್ ನೀಡಿದ ಉದ್ಯಮ ಇದು. ನಮ್ಮನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾವು ನೋಡಿಕೊಳ್ಳಲಾಗದೆ ಅದು ಇನ್ನೇನೋ ಆಗುವುದಕ್ಕಿಂತ, ನಮ್ಮ ರೀತಿ ಅನಿವಾರ್ಯತೆ ಇರುವವರಿಗೆ ಅದನ್ನು ಹಸ್ತಾಂತರಿಸೋದು ಉತ್ತಮ’ ಎಂಬುದು ಶೈನ್ ಶೆಟ್ಟಿ ಮಾತು.
‘ಗಲ್ಲಿ ಕಿಚನ್’ ನಡೆಸುತ್ತಿದ್ದ ಸ್ಥಳವನ್ನು ಮಾತ್ರ ಶೈನ್ ಶೆಟ್ಟಿ ನೀಡಿದ್ದಾರೆ. ಅವರು ‘ಗಲ್ಲಿ ಕಿಚನ್’ ಹೆಸರನ್ನು ನೀಡಿಲ್ಲ. ಹೀಗಾಗಿ, ‘ಗಲ್ಲಿ ಕಿಚನ್’ ಹೆಸರಿನ ಟೈಟಲ್ ಶೈನ್ ಶೆಟ್ಟಿ ಬಳಿಯೇ ಉಳಿದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Wed, 2 April 25