‘ಮುಸ್ತಫಾ’ ಶಿಶಿರ್ ಮುಂದಿವೆ ಹಲವು ಅವಕಾಶ, ಕೈಲಿರುವ ಸಿನಿಮಾಗಳೆಷ್ಟು?
Shishir Baikady: ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾನಲ್ಲಿ ಮುಸ್ತಫಾನ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದ ಶಿಶಿರ್ ಬೈಕಾಡಿಗೆ ಇದೀಗ ಒಂದರ ಹಿಂದೊಂದು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಶಿಶಿರ್ ಇದೀಗ ದುನಿಯಾ ವಿಜಯ್ ನಟಿಸುತ್ತಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಇನ್ನೂ ಕೆಲ ಸಿನಿಮಾಗಳು ಅವರ ಕೈಯಲ್ಲಿವೆ. ಇಲ್ಲಿದೆ ನೋಡಿ ಮಾಹಿತಿ...

ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಫಾ’ ಕತೆಯನ್ನು ಕೆಲ ಸಮಾನ ಮನಸ್ಕ ಯುವಕರೆಲ್ಲ ಸೇರಿ ಅದೇ ಹೆಸರಿನ ಸಿನಿಮಾ ಮಾಡಿದ್ದರು. ಡಾಲಿ ಧನಂಜಯ್ ಆ ಸಿನಿಮಾಕ್ಕೆ ಬೆಂಬಲ ನೀಡಿ ಸಿನಿಮಾ ಬಿಡುಗಡೆ ಮಾಡಿದ್ದರು, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಆ ಸಿನಿಮಾದ ನಿರ್ದೇಶಕ ಶಶಾಂಕ್ ಜೊತೆಗೆ ಸಿನಿಮಾದ ನಟ-ನಟಿಯರು ಸಹ ಬಹಳ ಗಮನ ಸೆಳೆದಿದ್ದರು. ಅದರಲ್ಲೂ ಮುಸ್ತಫಾ ಪಾತ್ರ ಮಾಡಿದ್ದ ಶಿಶಿರ್ ಬೈಕಾಡಿ.
‘ಮುಸ್ತಾಫ’ ಶಿಶಿರ್ ಅವರಿಗೆ ಚಿತ್ರರಂಗದಲ್ಲಿ ಕೆಲ ಒಳ್ಳೆ ಅವಕಾಶಗಳೇ ಅರಸಿ ಬಂದಿದೆ. ಡೇರ್ ಡೆವಿಲ್ ಚಿತ್ರದ ನಂತರ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ಶಿಶಿರ್ ಉತ್ತಮ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾನಲ್ಲಿ ಕ್ಲಾಸ್ ಪಾತ್ರದಲ್ಲಿ ನಟಿಸಿದ್ದ ಶಿಶಿರ್ ಇದೀಗ ‘ಲ್ಯಾಂಡ್ ಲಾರ್ಡ್’ ಸಿನಿಮಾನಲ್ಲಿ ಸಖತ್ ಮಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾವು ಎಲ್ಲ ಪಾತ್ರಗಳಿಗೂ ಒಗ್ಗುವ ನಟ ಎಂಬುದನ್ನು ಸಾಬೀತು ಮಾಡಲು ಇದೊಂದು ಬಹಳ ಒಳ್ಳೆಯ ಅವಕಾಶ ಶಿಶಿರ್ ಅವರಿಗೆ. ಇದೀಗ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಶಿಶಿರ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಶಿಶಿರ್ ಅದ್ಭುತವಾಗಿ ಕಾಣುತ್ತಿದ್ದಾರೆ.
‘ಕಾಟೇರ’ ಸಿನಿಮಾಕ್ಕೆ ಕತೆ ಬರೆದಿದ್ದ ಜಡೇಶ್ ‘ಲ್ಯಾಂಡ್ ಲಾರ್ಡ್’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದರ್ಶನ್ ನಟನೆಯ ‘ಸಾರಥಿ’ ಸಿನಿಮಾ ನಿರ್ಮಾಣ ಮಾಡಿದ್ದ ಕೆವಿ ಸತ್ಯಪ್ರಕಾಶ್, ‘ಲ್ಯಾಂಡ್ ಲಾರ್ಡ್’ ಸಿನಿಮಾ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಶಿಶಿರ್ಗೆ ಬಹಳ ಒಳ್ಳೆಯ ಪಾತ್ರವೇ ಇದೆಯಂತೆ. ಅಂದಹಾಗೆ ‘ಲ್ಯಾಂಡ್ ಲಾರ್ಡ್’ ಮಾತ್ರವೇ ಅಲ್ಲದೆ, ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾದಲ್ಲಿ ಗುರುತಿಸಿಕೊಂಡಿರೋ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕರ ಸಿನಿಮಾದಲ್ಲೂ ಶಿಶಿರ್ ಬೈಕಾಡಿ ಅಭಿನಯ ಮಾಡಿದ್ದು ಶೀಘ್ರದಲ್ಲೇ ಆ ಸಿನಿಮಾದ ಘೋಷಣೆಯನ್ನು ಚಿತ್ರತಂಡ ಮಾಡಲಿದೆ.
ಇದನ್ನೂ ಓದಿ:ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಶಿಶಿರ್ ಕನ್ನಡದಲ್ಲಿ ಮಾತ್ರವಲ್ಲದೆ ನೆರೆಯ ಚಿತ್ರರಂಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಶಿಶಿರ್, ಇದೀಗ ತಮಿಳಿನ ಒಂದು ಸಿನಿಮಾನಲ್ಲಿಯೂ ನಟಿಸಲು ಸಿದ್ಧರಾಗಿದ್ದಾರೆ. ತಮಿಳು ಸಿನಿಮಾದ ಮಾತುಕತೆಯನ್ನು ಶಿಶಿರ್ ಮುಗಿಸಿದ್ದಾರೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಶೀಘ್ರವೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ತಮಿಳು ಸಿನಿಮಾದ ಘೋಷಣೆ ಸಹ ಕೆಲವೇ ದಿನಗಳಲ್ಲಿ ಆಗಲಿದೆಯಂತೆ. ಒಟ್ಟಾರೆ ಶಿಶಿರ್ ಒಳ್ಳೆಯ ನಟನಾಗುವ ಎಲ್ಲ ನಿರೀಕ್ಷೆಯನ್ನು ಮೂಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Fri, 15 August 25




