
ಡಾಲಿ ಧನಂಜಯ್ (Daali Dhananjay) ಮತ್ತು ಶಿವಣ್ಣ ಮೊದಲ ಬಾರಿಗೆ ಒಂದು ಸಿನಿಮಾನಲ್ಲಿ ನಟಿಸಿದಾಗ ಇತಿಹಾಸ ಸೃಷ್ಟಿಯಾಗಿತ್ತು. ಎರಡನೇ ಬಾರಿ ದೊಡ್ಡ ಪರದೆಯ ಮೇಲೆ ಇವರಿಬ್ಬರು ಎದುರು-ಬದುರಾದಾಗ ಅಷ್ಟೇನೂ ಸದ್ದಾಗಲಿಲ್ಲ. ಇದೀಗ ಮೂರನೇ ಬಾರಿ ಈ ಜೋಡಿ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಒಂದಾಗುತ್ತಿದ್ದಾರೆ. ‘ಕವಲುದಾರಿ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲ ದೇಶದಾದ್ಯಂತ ಸಹೃದಯಿ ಸಿನಿಮಾ ಪ್ರೇಮಿಗಳ ಸೆಳೆದಿರುವ ನಿರ್ದೇಶಕ ಹೇಮಂತ್ ರಾವ್ ಅವರು ಡಾಲಿ ಹಾಗೂ ಶಿವಣ್ಣನವರನ್ನು ಮತ್ತೊಮ್ಮೆ ಒಟ್ಟಿಗೆ ಸೇರಿಸುತ್ತಿದ್ದಾರೆ.
ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅವರು ಹೊಸದೊಂದು ಸಿನಿಮಾನಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯೇ ಹರಿದಾಡಿತ್ತು. ಇದೀಗ ಸುದ್ದಿ ಖಾತ್ರಿ ಆಗಿದೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹೆಸರಿನ ಸಿನಿಮಾಕ್ಕಾಗಿ ಈ ಜೋಡಿ ಒಂದಾಗುತ್ತಿದೆ. ಹೇಮಂತ್ ರಾವ್ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ.
ಕ್ರಿಯಾಶೀಲ ನಿರ್ದೇಶಕರಾಗಿರುವ ಹೇಮಂತ್ ರಾವ್ ಅವರು, ‘666 ಡ್ರೀಮ್ ಥಿಯೇಟರ್’ ಸಿನಿಮಾದ ಟೈಟಲ್ ಟೀಸರ್ ಅನ್ನು ಅದ್ಭುತವಾಗಿ ವಿನ್ಯಾಸ ಮಾಡಿದ್ದಾರೆ. ಅನಿಮೇಷನ್ಸ್ ಬಳಸಿ ಸಿನಿಮಾದ ಟೀಸರ್ ಅನ್ನು ಮಾಡಿದ್ದು, ಟೈಟಲ್ ಟೀಸರ್ನಲ್ಲಿ ಸಣ್ಣ ಕತೆಯೊಂದನ್ನು ಸಹ ಹೇಳಿದ್ದಾರೆ. ಟೀಸರ್ ಮತ್ತು ಟೀಸರ್ಗೆ ಬಳಸಿರುವ ಸಂಗೀತ ಒಂದು ರೀತಿ ನಾಸ್ಟಾಲಿಜಿಕ್ ಫೀಲ್ ನೀಡುತ್ತಿದೆ. ಸಿನಿಮಾದ ಟೈಟಲ್ಗೆ ಬಳಸಿರುವ ಫಾಂಟ್ ಸಹ ಹಳೆಯ ಕನ್ನಡದ ಬಾಂಡ್ ಸಿನಿಮಾಗಳ ಫಾಂಟ್ ರೀತಿ ಕಾಣುತ್ತಿದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗ್ತಿದೆ: ಹಿರಿಯ ನಿರ್ದೇಶಕ
ಈ ಹಿಂದೆ ಹೇಮಂತ್ ರಾವ್, ಶಿವರಾಜ್ ಕುಮಾರ್ ಜೊತೆಗೆ ‘ಭೈರವನ ಕೊನೆ ಪಾಠ’ ಸಿನಿಮಾ ಘೋಷಣೆ ಮಾಡಿದ್ದರು. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಈಗ ‘666 ಡ್ರೀಮ್ ಥಿಯೇಟರ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಹೇಮಂತ್ ರಾವ್ ಅವರ ಮೆಚ್ಚಿನ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶಾಖ್ ಜೆ ಗೌಡ. ಕ್ಯಾಮೆರಾ ಕೆಲಸ ಆದಿತ್ಯ ಗುರುಮೂರ್ತಿ ಅವರದ್ದು. ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ.
ಶಿವರಾಜ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಆನಂದ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ‘45’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ತಮಿಳಿನ ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ತಮಿಳಿನಲ್ಲಿ ಒಂದು ಪ್ರತ್ಯೇಕ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದೆಲ್ಲದರ ನಡುವೆ ಈಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ